ಬೆಂಗಳೂರು, ಆ.16- ಮಹದಾಯಿ, ಕಳಸಾ ಬಂಡೂರಿ ವಿಷಯದಲ್ಲಿ ನ್ಯಾಯಾಧಿಕರಣದಿಂದ ನಮಗೆ ಸೂಕ್ತ ನ್ಯಾಯ ದೊರೆತಿಲ್ಲ ಎಂದು ಹೇಳಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಈ ಸಂಬಂಧ ಸರ್ಕಾರ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿ ರಾಜ್ಯದ ಪಾಲಿನ ನೀರನ್ನು ಪಡೆಯಬೇಕೆಂದು ಆಗ್ರಹಿಸಿದ್ದಾರೆ.
ಕನ್ನಡ ಒಕ್ಕೂಟದ ಮುಖಂಡರಾದ ಸಾ.ರಾ.ಗೋವಿಂದು, ಕೆ.ಆರ್.ಕುಮಾರ್, ಗಿರೀಶ್‍ಗೌಡ ಮುಂತಾದವರು ನಗರದ ಬಸವೇಶ್ವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ನ್ಯಾಯಾಧೀಕರಣದ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಕೂಡಲೇ ಸರ್ಕಾರ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಬೇಕೆಂದು ಆಗ್ರಹಿಸಿದರು.
36 ಟಿಎಂಸಿ ನೀರು ಕೇಳಿದರೆ ಕೇವಲ 13.5 ಟಿಎಂಸಿ ನೀರನ್ನು ಕೊಡಲಾಗಿದೆ. ಕುಡಿಯಲು ನೀರು ಮತ್ತು ಕೃಷಿಗೆ ನೀರು ಸಾಕಾಗುವುದಿಲ್ಲ. ಕಳೆದ ಮೂರು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತ ಬಂದಿದ್ದರೂ ನ್ಯಾಯ ದೊರೆಯದೆ ಇರುವುದು ದುರದೃಷ್ಟಕರವಾಗಿದೆ. 8.5 ಟಿಎಂಸಿ ನೀರನ್ನು ವಿದ್ಯುತ್ ಉತ್ಪಾದನೆಗೆ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ವಿದ್ಯುತ್ ಉತ್ಪಾದನೆ ನಂತರದ ನೀರನ್ನು ಬಳಕೆ ಮಾಡಿಕೊಳ್ಳುವ ಬಗ್ಗೆ ತೀರ್ಪಿನಲ್ಲಿ ಸ್ಪಷ್ಟ ಉಲ್ಲೇಖವಿಲ್ಲ. ಈ ಎಲ್ಲ ಅಂಶಗಳನ್ನು ಕ್ರೋಢೀಕರಿಸಿ ಸುಪ್ರೀಂಕೋರ್ಟ್‍ನಲ್ಲಿ ದಾವೆ ಹೂಡಬೇಕು ಎಂದು ವಾಟಾಳ್ ತಿಳಿಸಿದರು.
ಮಹದಾಯಿಗಾಗಿ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು ಹೋರಾಟ ಮಾಡಿ ನೋವು ಅನುಭವಿಸಿದ್ದಾರೆ. ಸಾವುಗಳು ಸಂಭವಿಸಿವೆ. ಸರ್ಕಾರ ಇವರ ಮೇಲಿನ ಎಲ್ಲ ಕೇಸುಗಳನ್ನು ವಾಪಸ್ ಪಡೆಯಬೇಕು ಎಂದು ಹೇಳಿದರು.
ಮಹದಾಯಿ ವಿವಾದದಲ್ಲಿ ನ್ಯಾಯ ದೊರೆಯಿತು ಎಂದು ಸಂಭ್ರಮಿಸುವ ಅಗತ್ಯವಿಲ್ಲ. ನಮಗೆ ಇನ್ನೂ ಸೂಕ್ತ ನ್ಯಾಯ ದೊರೆತಿಲ್ಲ. ಇದಕ್ಕಾಗಿ ಮತ್ತಷ್ಟು ಹೋರಾಟ ಮಾಡಬೇಕಾಗಿದೆ ಎಂದು ಅವರು ಹೇಳಿದರು.