ಕೊಚ್ಚಿ,ಆ.15-ಕಳೆದ ಎರಡು ವಾರಗಳಿಂದ ಎಡಬಿಡದೆ ನಿರಂತರವಾಗಿ ಕೇರಳದಲ್ಲಿ ಸುರಿಯುತ್ತಿರುವ ಮಹಾಮಳೆಗೆ ಇಂದು ಮತ್ತೆ ಐವರು ಸಾವನ್ನಪ್ಪಿದ್ದು, ಕುಂಭದ್ರೋಣ ಮಳೆಗೆ ಒಟ್ಟು ಈವರೆಗೂ 50 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
ರಾಜ್ಯದ ಬಹುತೇಕ ಕಳೆದ ಆ.8ರಿಂದ ನಿರಂತರವಾಗಿ ಒಂದೇ ಸಮನೆ ಮಳೆ ಸುರಿಯುತ್ತಿರುವ ಕಾರಣ ದೇವರನಾಡು ಅಕ್ಷರಶಃ ನಲುಗಿ ಹೋಗಿದೆ. ರಾಜ್ಯದ ಒಟ್ಟು 14 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕಳೆದ ರಾತ್ರಿ ಭಾರೀ ಮಳೆ ಸುರಿದ ಪರಿಣಾಮ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಾಲ್ಕು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ. ಮುಂದಿನ ನಾಲ್ಕು ದಿನಗಳವರೆಗೆ ಸ್ವದೇಶಿ, ವಿದೇಶಿ ಸೇರಿದಂತೆ ಯಾವುದೇ ರೀತಿಯ ವಿಮಾನಗಳ ಹಾರಾಟ ನಡೆಸುವುದಿಲ್ಲ ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ನಿಲ್ದಾಣದ ರನ್ ವೇವರೆಗೂ ನೀರು ನುಗ್ಗಿರುವುದರಿಂದ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ರಾಜ್ಯದ ಬಹುತೇಕ ಎಲ್ಲ ಅಣೆಕಟ್ಟುಗಳು ತುಂಬಿ ತುಳುಕುತ್ತಿವೆ. ಪರಿಣಾಮವಾಗಿ 33 ಅಣೆಕಟ್ಟುಗಳ ಗೇಟ್ಗಳನ್ನು ತೆರೆಯಲಾಗಿರುವುದರಿಂದ ವ್ಯಾಪಕವಾಗಿ ನೀರು ಹೊರ ಹೋಗುತ್ತಿದೆ.
ಪೆರಿಯರ್ ನದಿಯಲ್ಲಿ ಭಾರೀ ಪ್ರವಾಹ ಉಂಟಾಗಿದ್ದರಿಂದ ಐದು ಜನರು ಕೊಚ್ಚಿ ಹೋಗಿದ್ದಾರೆ. ಮಲ್ಲಾಪುರಂನಲ್ಲಿ ಸತಿಪತಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರೆ, ಆರು ವರ್ಷದ ಮಗು ನಾಪತ್ತೆಯಾಗಿದೆ.
ಅಣೆಕಟ್ಟುಗಳಿಂದ ನೀರನ್ನು ಹೊರ ಬಿಡುತ್ತಿರುವ ಪರಿಣಾಮ ಎಲ್ಲೆಡೆ ಭೂ ಕುಸಿತ ಉಂಟಾಗಿದೆ. ರಸ್ತೆಗಳು ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡಿವೆ. ವಿದ್ಯುತ್ ಸಂಪರ್ಕ, ದೂರವಾಣಿ, ಮೊಬೈಲ್ ಸಂಪರ್ಕವೂ ಕಡಿತವಾಗಿರುವುದರಿಂದ ಹೊರ ಜಗತ್ತಿನ ಸಂಪರ್ಕವೇ ಜನರಿಗೆ ಇಲ್ಲವಂತಾಗಿದೆ.
ಇಡುಕಿ ಅಣೆಕಟ್ಟು ಅಪಾಯ ಮೀರಿರುವುದರಿಂದ ನೀರನ್ನು ಹೊರಬಿಡಲಾಗುತ್ತಿದೆ. ಅನೇಕ ಕಟ್ಟಡಗಳು ಉರುಳಿಬಿದ್ದಿದ್ದರೆ ಹೊಲದಲ್ಲಿ ಬೆಳೆದಿದ್ದ ಬೆಳೆ ಕೊಚ್ಚಿಕೊಂಡು ಹೋಗಿದೆ. ನದಿಪಾತ್ರದ ಜನರನ್ನು ಬಲವಂತವಾಗಿ ಸ್ಥಳಾಂತರ ಮಾಡಲಾಗುತ್ತಿದೆ.
ಯಾವುದೇ ಕಾರಣಕ್ಕೂ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಕಟ್ಟಾಜ್ಞೆ ವಿಧಿಸಲಾಗಿದೆ. ಕರಾವಳಿ ತೀರಾ ಪ್ರದೇಶಗಳಲ್ಲಿ ಸಮುದ್ರಕ್ಕೆ ದೋಣಿಗಳನ್ನು ಇಳಿಸಬಾರದು, ಜಿಲ್ಲಾಧಿಕಾರಿಗಳು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಬೇಕೆಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.
ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ತಿರುವನಂತನಪುರ, ಕೊಚ್ಚಿ, ಮನ್ನಾರ್ ಸೇರಿದಂತೆ ಸದ್ಯಕ್ಕೆ ಮಳೆ ಪೀಡಿತ ಪ್ರದೇಶಗಳಿಗೆ ಪ್ರವಾಸಿಗರು ಬರಬಾರದೆಂದು ಸರ್ಕಾರ ಮನವಿ ಮಾಡಿಕೊಂಡಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸರ್ಕಾರ ಎಲ್ಲ ರೀತಿಯ ಪರಿಹಾರ ಒದಗಿಸಲು ಸಿದ್ದವಿದೆ. ಜನರು ಆತಂಕಕ್ಕೊಳಗಾಗಬಾರದು. ಸಾರ್ವಜನಿಕರು, ಸಂಘಸಂಸ್ಥೆಗಳು, ವಿವಿಧ ಕ್ಷೇತ್ರಗಳ ಪ್ರಮುಖರು ಉದಾರವಾಗಿ ದೇಣಿಗೆ ನೀಡುವಂತೆ ಅವರು ಮನವಿ ಮಾಡಿದ್ದಾರೆ.