ನಾಳೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ವಿತರಣೆ

Varta Mitra News

 

ಬೆಂಗಳೂರು, ಆ.15- ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ನಾಳೆ ನಾಡಪ್ರಭು ಕೆಂಪೇಗೌಡ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ವೇದಿಕೆ ಸಿದ್ಧವಾಗಿದೆ.
ಪಾಲಿಕೆ ಕಚೇರಿಯ ಗಾಜಿನ ಮನೆಯಲ್ಲಿ ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 340ಕ್ಕೂ ಹೆಚ್ಚು ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ವಿತರಿಸಲಿದ್ದಾರೆ.
ಈ ಹಿಂದೆ 240 ಸಾಧಕರಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿತ್ತಾದರೂ ಸಮ್ಮಿಶ್ರ ಸರ್ಕಾರದ ಪ್ರಮುಖರಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಶಸ್ತಿ ಪುರಸ್ಕøತರ ಸಂಖ್ಯೆ 340ರ ಗಡಿ ದಾಟುವ ಸಾಧ್ಯತೆ ಇದೆ.
ನಾಳೆ ಬೆಳಗ್ಗೆ 8 ಗಂಟೆಗೆ ಮೇಯರ್ ಸಂಪತ್‍ರಾಜ್ ಅವರು ಪಾಲಿಕೆ ಮುಂಭಾಗದಲ್ಲಿರುವ ನಾಡಪ್ರಭು ಕೆಂಪೇಗೌಡರು ಹಾಗೂ ವೀರನಾರಿ ಲಕ್ಷ್ಮಿದೇವಮ್ಮ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕೆಂಪೇಗೌಡ ದಿನಾಚರಣೆಗೆ ವಿದ್ಯುಕ್ತ ಚಾಲನೆ ನೀಡಲಾಗುವುದು.
9 ಗಂಟೆಗೆ ಲಾಲ್‍ಬಾಗ್‍ನಲ್ಲಿರುವ ಗಡಿಗೋಪುರದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಮೇಯರ್ ಸಂಪತ್‍ರಾಜ್ ಅವರು ಪೂಜೆ ಸಲ್ಲಿಸುವ ಮೂಲಕ ಕೆಂಪೇಗೌಡ ಜ್ಯೋತಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಲಾಲ್‍ಬಾಗ್, ಕೋರಮಂಗಲ, ಕೆಂಪಾಂಬುದಿ ಕೆರೆ ಹಾಗೂ ಮೇಕ್ರಿ ವೃತ್ತದಲ್ಲಿರುವ ನಾಲ್ಕು ಗಡಿಗೋಪುರಗಳ ಜತೆಗೆ ಮಾಗಡಿಯಲ್ಲಿರುವ ಕೆಂಪೇಗೌಡರ ಸಮಾಧಿಯಿಂದ ಏಕಕಾಲಕ್ಕೆ ಜ್ಯೋತಿಯಾತ್ರೆ ಆರಂಭವಾಗಲಿದೆ.
ಜ್ಯೋತಿಯಾತ್ರೆಯಲ್ಲಿ ವಿವಿಧ ಕಲಾತಂಡಗಳು, ಸ್ತಬ್ಧಚಿತ್ರ ಪ್ರದರ್ಶನಗಳು ಹೆಜ್ಜೆ ಹಾಕಲಿದ್ದು, ಸ್ಥಳೀಯ ಶಾಸಕರು ಮತ್ತು ಬಿಬಿಎಂಪಿ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
9 ಗಂಟೆಗೆ ಆರಂಭವಾಗಲಿರುವ ಜ್ಯೋತಿಯಾತ್ರೆ 11 ಗಂಟೆ ಸುಮಾರಿಗೆ ಪಾಲಿಕೆ ಕೇಂದ್ರ ಕಚೇರಿಗೆ ಆಗಮಿಸಲಿದ್ದು, ಜ್ಯೋತಿಯಾತ್ರೆಯನ್ನು ಮಹಾಪೌರ ಸಂಪತ್‍ರಾಜ್ ಅವರು ಬರಮಾಡಿಕೊಳ್ಳಲಿದ್ದಾರೆ.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮೇಯರ್ ಸಂಪತ್‍ರಾಜ್ ಅವರು ಗಾಜಿನ ಮನೆಯಲ್ಲಿ ಉತ್ತಮ ಅಧಿಕಾರಿ ಮತ್ತು ನೌಕರರ ಪ್ರಶಸ್ತಿ ವಿತರಿಸಲಿದ್ದಾರೆ.
ಸಂಜೆ 6 ಗಂಟೆವರೆಗೂ ಕೇಂದ್ರ ಕಚೇರಿ ಆವರಣದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಲಿವೆ. ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 2018ನೆ ಸಾಲಿನ ಕೆಂಪೇಗೌಡ ಪ್ರಶಸ್ತಿ ವಿತರಿಸಲಿದ್ದಾರೆ.
ರಾತ್ರಿ 8 ಗಂಟೆಗೆ ಪಾಲಿಕೆ ನೌಕರರ ಕಲಾಸಂಘದವರು ಶ್ರೀಕೃಷ್ಣ ಸಂಧಾನ ಪೌರಾಣಿಕ ನಾಟಕ ನಡೆಸಿಕೊಡಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ