ಕರ್ನಾಟಕ ಸೇರಿ ದೇಶದ ಹಲವೆಡೆ ಮುಂದುವರಿದ ಮಳೆ: ಕರಾವಳಿ, ಮಲೆನಾಡು ಭಾಗದಲ್ಲಿ ಶಾಲಾ, ಕಾಲೇಜುಗಳಿಗೆ ರಜೆ

ಬೆಂಗಳೂರು: ಕರ್ನಾಟಕ ಸೇರಿ ದೇಶದ ಹಲವೆಡೆ ವರುಣ ತಂದ ಅವಾಂತರ ಅಷ್ಟಿಷ್ಟಲ್ಲ. ಕಂಡು ಕೇಳರಿಯದ ಮಳೆಗೆ ಕೇರಳ ಅಕ್ಷರಶಃ ನಲುಗಿ ಹೋಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಉತ್ತರ ಭಾರತದಲ್ಲೂ ಮೇಘಸ್ಫೋಟ ಮಳೆಯಿಂದ ಮನೆ, ಮರ, ಕಟ್ಟಡಗಳೆಲ್ಲಾ ಮುಳುಗಿ ಹೋಗಿವೆ. ರಾಜ್ಯದ ಪಶ್ಚಿಮಘಟ್ಟ ಹಾಗೂ ಕರಾವಳಿ, ಕೊಡಗು ಭಾಗದಲ್ಲಿ ಮಳೆ ಭಾರೀ ಅವಾಂತರ ಸೃಷ್ಟಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಹೊಳೆಯಲ್ಲಿ ಕೊಚ್ಚಿ ಹೋಗಿದ್ದ ವೃದ್ಧನ ಶವ ಪತ್ತೆಯಾಗಿದೆ. ಜಿಲ್ಲೆಯಲ್ಲಿ ನದಿ-ತೊರೆಗಳು ಉಕ್ಕಿ ಹರಿಯುತ್ತಿದ್ದು ಮಂಗಳೂರು, ಬೆಳ್ತಂಗಡಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಹಾಸನ ಜಿಲ್ಲೆ ಸಕಲೇಶಪುರದಲ್ಲೂ ಮಳೆ ಮುಂದುವರಿದಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸಕಲೇಶಪುರ ಮತ್ತು ಆಲೂರನಲ್ಲಿ ಮಳೆ ಮುಂದುವರಿದಿದೆ. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಭದ್ರಾ, ತುಂಗಾ ನದಿಗಳು ಅಪಾಯಮಟ್ಟ ಮೀರಿ ಹರೀತಿವೆ. ಜಮೀನುಗಳಿಗೆ ನೀರು ನುಗ್ಗಿದ್ದು ಮುಳ್ಳಯ್ಯನಗಿರಿ ಬಳಿ ಗುಡ್ಡ ಕುಸಿದಿದೆ. ಶೃಂಗೇರಿ, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರದಲ್ಲೂ ಮಳೆ ಮುಂದುವರಿದಿದ್ದು ಶಾಲಾ-ಕಾಲೇಜಗಳಿಗೆ ರಜೆ ನೀಡಲಾಗಿದೆ. ಕೊಡಗಿನಲ್ಲೂ ಗಾಳಿ ಸಮೇತ ಭಾರೀ ಮಳೆಯಾಗುತ್ತಿದ್ದು ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೊಮ್ಮೆ ಜಲಾವೃತವಾಗಿದೆ. ಭಾರೀ ಮಳೆಗೆ ಕಾವೇರಿ, ಕನ್ನಿಕೆ, ಸುಜೋತಿ ನದಿಗಳು ಮೈದುಂಬಿ ಹರಿಯುತ್ತಿವೆ. ಭಾರೀ ವರ್ಷಧಾರೆಯಿಂದ ಜನ ತತ್ತರಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆ ಮುಂದುವರಿದಿದ್ದು ಶಿರಸಿ, ಸಿದ್ದಾಪುರ, ಯಲ್ಲಾಪುರ, ಕಾರವಾರ, ಅಂಕೋಲಾ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಶಿವಮೊಗ್ಗದಲ್ಲೂ ಮಳೆ ಮುಂದುವರಿದಿದ್ದು, ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ತಾಲೂಕಿನ ಶಾಲೆಗಳಿಗೆ ರಜೆ ನೀಡಲಾಗಿದೆ. ಕಾವೇರಿ ಕೊಳ್ಳದಲ್ಲಿಯೂ ಧಾರಾಕಾರ ಮಳೆ ಆಗುತ್ತಿರೋದರಿಂದ ಮಂಡ್ಯದ ಕೆಆರ್‍ಎಸ್ ಡ್ಯಾಂನಿಂದ 60 ಸಾವಿರ ಕ್ಯೂಸೆಕ್ ನೀರು ಬಿಡುಗಡೆ. ಕಬಿನಿಯಿಂದ ನೀರು ಬಿಟ್ಟ ಹಿನ್ನೆಲೆ ಎಲ್ಲೆಡೆ ಪ್ರವಾಹ ಭೀತಿ ಉಂಟಾಗಿದೆ.

ತುಳುನಾಡು ಉಡುಪಿ ಜಿಲ್ಲೆಯಲ್ಲಿ ಸುಂಟರಗಾಳಿ ಸಹಿತ ಮಳೆ ಸುರಿದು 50ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ, ಕಾಪು ತಾಲೂಕಿನ ಪೆರ್ಣಂಕಿಲ ಗ್ರಾಮದ ಜಡ್ಡು, ಜನತಾನಗರ, ವರ್ವಾಡಿ ಸುತ್ತಮುತ್ತ ಮನೆಗಳ ಹಂಚು, ತಗಡು ಶೀಟುಗಳಿಗೆ ಹಾನಿಯಾಗಿದೆ. ಹಲಸು, ಮಾವು ಸಹಿತ ನೂರಾರು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಕುಂದಾಪುರ ಬಳಿ ಟೆಂಪೋ ಮೇಲೆ ಮರದ ಕೊಂಬೆ ಬಿದ್ದು ಜಖಂ ಆಗಿದೆ. ಆದ್ರೆ ಟೆಂಪೋದಲ್ಲಿದ್ದ ತಂದೆ-ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೇರಳ:ನೆರೆಯ ಕೇರಳದಲ್ಲೂ ಮಳೆ ಅಬ್ಬರ ಮುಂದುವರಿದಿದೆ. ಮಳೆಯಿಂದಾಗಿ ಇದುವರೆಗೆ 40 ಮಂದಿ ಸಾವನ್ನಪ್ಪಿದ್ದಾರೆ. ಪಂಪಾ ನದಿ ಉಕ್ಕಿ ಹರಿಯುತ್ತಿರೋದ್ರಿಂದ ಶಬರಿಮಲೆಗೆ ಜಲದಿಗ್ಭಂಧನ ಹೇರಿದೆ. ಪ್ರವಾಹ ಪರಿಸ್ಥಿತಿಯಿಂದಾಗಿ ವನ್ಯಜೀವಿಗಳೂ ಒದ್ದಾಡಿ ಹೋಗಿವೆ. ಪೆರಿಯಾರ್ ನದಿಯಲ್ಲಿ ಮರಿಯಾನೆ ಸೇರಿ ಜಿಂಕೆಗಳು, ಮುಂಗೂಸಿಗಳು ಎಲ್ಲವೂ ಕೊಚ್ಚಿ ಹೋಗಿವೆ. ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದ ಮಂಡಿಯಲ್ಲಿ ಮೇಘಸ್ಫೋಟಕ್ಕೆ ಕೆಸರಿನ ಮಣ್ಣೆಲ್ಲಾ ಮನೆ, ಶಾಲಾ-ಕಾಲೇಜುಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ