ಲೋಕಸಭಾ ಚುನಾವಣೆಗೆ ಬೀದರ್ ನಲ್ಲಿ ಪಾಂಚಜನ್ಯ ಮೊಳಗಿಸಿದ ರಾಹುಲ್

ಬೀದರ್: ಕರ್ನಾಟಕದ ಕಿರೀಟ ಗಡಿ ಜಿಲ್ಲೆ ಬೀದರ್ ನಿಂದಲೇ ಲೋಕಸಭಾ ಚುನಾವಣೆಗೆ ಚಾಲನೆ ನೀಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪಾಂಚಜನ್ಯ ಮೊಳಗಿಸಿದರು. ಕೇಂದ್ರ ಸರ್ಕಾರದ ವೈಫಲ್ಯತೆಯನ್ನ ಖಂಡಿಸುವ ಮೂಲಕ ಈ ಭಾರಿ ಕಾಂಗ್ರೆಸ್ ಕೈ ಹಿಡಿಯುವಂತೆ ದೇಶದ ಜನರಿಗೆ ಕರೆ ನೀಡಿದರು.
೨ ಕೋಟಿ ಉದ್ಯೋಗ ಸೃಷ್ಟಿ,ದೇಶದ ನಾಗರೀಕರಿಗೆ ೧೫ ಲಕ್ಷ ಹಣ ಹಾಕುವುದು,ರೈತರ ಸಮಸ್ಯೆಗೆ ಸ್ಪಂದಿಸುವ ವಿಚಾರದಲ್ಲಿ ಪ್ರಧಾನಿ ಮೋದಿ ಕೊಟ್ಟ ಮಾತನ್ನ ಉಳಿಸಿಕೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಾನ್ಸ್ ಜೊತೆಗಿನ ರಫೈಲ್ ಏರ್ ಕ್ರಾಫ್ಟ್ ಡೀಲ್ ಬಗ್ಗೆ ನೀವು ಬಹಿರಂಗ ಚರ್ಚೆಗೆ ಬನ್ನಿ ಎಂದು ಪ್ರಧಾನಿ ಮೋದಿಗೆ ಪಂಥಾಹ್ವಾನ ನೀಡಿದರು. ಒಪ್ಪಂದದಲ್ಲಿ ಮಾಡಿಕೊಂಡಿರುವ ವಿಮಾನ ಖರೀದಿ ಬೆಲೆಯ ಬಗ್ಗೆ ಬಹಿರಂಗ ಪಡಿಸಿ ಧಮ್ ಇದ್ರೆ ಮೋದಿಯವರನ್ನ ತಂದು ನನ್ನ ಮುಂದೆ ನಿಲ್ಲಿಸಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.
ಕಳ್ಳತನ ಮಾಡಿದವರಿಗೆ ಕಣ್ಣಲ್ಲಿ ಕಣ್ಣಿಟ್ಟು ನೋಡೋಕೆ ಹೇಗೆ ಸಾಧ್ಯ ಅಂತ ಸಂಸತ್ ನಲ್ಲಿ ತಾವು ರಫೇಲ್ ಚರ್ಚೆ ವೇಳೆ ಮೋದಿ ಹಗ್ ಮಾಡಿದರ ಬಗ್ಗೆ ಪ್ರಸ್ತಾಪ ಮಾಡಿದರು.
ಕಳೆದ ವಿಧಾನಸಭೆ ಚುನಾವಣೆ ವೇಳೆ ಎಲ್ಲಾ ಕಾರ್ಯಕ್ರಮಗಳಲ್ಲಿ ನುಡಿದಂತೆ ನಡೆ ಎಂಬ ವಚನ ಪ್ರಸ್ತಾಪಿಸಿ ಬಸವಣ್ಣನವರಿಗೆ ಗೌರವ ಸಲ್ಲಿಸುತ್ತಿದ್ದ ರಾಹುಲ್ ಗಾಂಧಿ ಈ ಭಾರಿ ಅದನ್ನ ಮರೆತಿದ್ದಾರೆ…ಬಸವಣ್ಣನ ಕರ್ಮಭೂಮಿ ಬೀದರ್ ಕಾರ್ಯಕ್ರಮದಲ್ಲಿ ಭಾಷಣದುದ್ದಕ್ಕೂ ರಾಹುಲ್ ಬಸವಣ್ಣನವರನ್ನ ನೆನಪಿಸಿಕೊಳ್ಳಲೇ ಇಲ್ಲ..ಇನ್ನು ತಮ್ಮ  ನಾಯಕನನ್ನೇ ಅನುಸರಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಭಾಷಣಾದುದ್ದಕ್ಕೂ ಹಿಂದಿ ಹಾಗೂ ಉರ್ದು ಮಿಕ್ಸ್ ನಲ್ಲೇ ಮಾತನಾಡಿ ಕನ್ನಡವನ್ನೇ ಮರೆತರು..
ಇನ್ನು ಕಳೆದ ವಿಧಾನಸಭೆ ಚುನಾವಣೆಯ ನಂತರ ಮಾಜಿ ಸಿಎಂ ಸಿದ್ದರಾಮಯ್ಯ ತಟಸ್ಥರಾಗಿದ್ದರು…ಎಲ್ಲಿಯೂ ಹೆಚ್ಚು ಮಾತನಾಡದೆ ಮೌನಂ ಶರಣಂ ಗಚ್ಛಾಮಿ ಅಂತ ಸುಮ್ಮನಾಗಿದ್ದರು. ಆದರೆ ಇವತ್ತಿನ ಬೀದರ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ವಿರುದ್ಧ ತಮ್ಮ ವಂಗ್ಯ ಭರಿತ ಮಾತು ಹಾಗೂ ವಾಗ್ದಾಳಿಯನ್ನ ಮುಂದುವರಿಸಿದರು. ಪದೇ ಪದೇ ಮನ್ ಕೀ ಬಾತ್ ಅನ್ನ ಪ್ರಸ್ತಾಪಿಸಿ ಮೋದಿಯವರನ್ನ ಲೇವಡಿಮಾಡಿ, ಖಡಕ್ ಶೈಲಿಯ ಭಾಷಣವನ್ನೂ ಮತ್ತೆ ಮುಂದುವರಿಸಿದರು.
ಇನ್ನು ಮಲ್ಲಿಕಾರ್ಜುನ ಖರ್ಗೆ ಹಾಗೂ ದಿನೇಶ್ ಗುಂಡೂರಾವ್ ಭಾಷಣದಲ್ಲಿ ಕೇಂದ್ರ ಸರ್ಕಾರದ ವೈಫಲ್ಯದ ಬಗ್ಗೆ ಸಾಕಷ್ಟು ನೀರಿಳಿಸಿದರು.
ಒಟ್ಟಾರೆ ಇವತ್ತಿನ ಬೀದರ್ ಜನಧ್ವನಿ ಕಾರ್ಯಕ್ರಮದ ಮೂಲಕ ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಿದೆ..ರಾಜ್ಯದ ೨೮ ಕ್ಷೇತ್ರಗಳ ಪೈಕಿ ೨೦ ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಉಮ್ಮಸ್ಸಿನಲ್ಲಿ ಮುಂದಡಿಯಿಟ್ಟಿದೆ‌.ಹೀಗಾಗಿ ರಾಹುಲ್ ರನ್ನ ಕಾರ್ಯಕ್ರಮಕ್ಕೆ ಕರೆಸಿ ಜನರನ್ನ ಸೆಳೆಯುವ ಕಾರ್ಯತಂತ್ರಕ್ಕೆ ಕಾಂಗ್ರೆಸ್ ಮುಂದಾಗಿದೆ.ಆದರೆ ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ