ಬೆಂಗಳೂರು, ಆ.13- ಕರ್ನಾಟಕ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತಾಕತ್ತಿದ್ದರೆ, ಅದರಲ್ಲಿ ಶೇ.50ರಷ್ಟು ಹೊರೆಯನ್ನು ಕೇಂದ್ರ ಸರ್ಕಾರ ಹೊರಲಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಸವಾಲು ಎಸೆದಿದ್ದಾರೆ.
ಬೀದರ್ನಲ್ಲಿ ನಡೆದ ಜನಧ್ವನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈತರ ಬಗ್ಗೆ ದೊಡ್ಡ ದೊಡ್ಡ ಮಾತುಗಳಲ್ಲಿ ಭಾಷಣ ಬಿಗಿಯುತ್ತಾರೆ. ಅವರ ಮಾತುಗಳಲ್ಲಿ ಸತ್ಯಾಂಶವಿದ್ದರೆ ನನ್ನ ಸವಾಲನ್ನು ಸ್ವೀಕರಿಸಲಿ. ಕರ್ನಾಟಕ ಸರ್ಕಾರ ಕೃಷಿಕರ ಸಾವಿರಾರು ಕೋಟಿ ರೂ.ಗಳ ಸಾಲ ಮನ್ನಾ ಮಾಡಿದೆ. ಮೋದಿಯವರಿಗೆ ಧಮ್ಮಿದ್ದರೆ ಅದರಲ್ಲಿ ಶೇಕಡ ಅರ್ಧದಷ್ಟನ್ನು ಮರುಪಾವತಿ ಮಾಡಲಿ. ಆದರೆ ಮೋದಿ ಮಾಡುವುದಿಲ್ಲ. ಉದ್ಯಮಿಗಳ, ಧನಿಕರ ಸಾವಿರಾರು ಕೋಟಿ ಸಾಲ ಮನ್ನಾ ಮಾಡುತ್ತಾರೆ. ಬಡವರ, ರೈತರ ಬಗ್ಗೆ ಯಾವುದೇ ಕಾಳಜಿ ತೋರಿಸುವುದಿಲ್ಲ ಎಂದು ಟೀಕಿಸಿದರು.
ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿವಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಈಗ ಯುವಕರಿಗೆ ಪಕೋಡಾ ಮಾರಿ, ನಾಲೆಯಲ್ಲಿ ಗ್ಯಾಸ್ ಪೈಪ್ ಹಾಕಿ ಎಂಬ ಸಲಹೆ ನೀಡುತ್ತಿದ್ದಾರೆ. ಉದ್ಯೋಗ ಸೃಷ್ಟಿಸುವುದರಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಚೀನಾ ಸರ್ಕಾರ 24 ಗಂಟೆಯಲ್ಲಿ 15 ಸಾವಿರ ಉದ್ಯೋಗ ಸೃಷ್ಟಿಸಿದರೆ, ನಮ್ಮ ಸರ್ಕಾರ ಕೇವಲ 4 ಸಾವಿರ ಉದ್ಯೋಗ ಸೃಷ್ಟಿಸುತ್ತಿದೆ ಎಂದು ಹೇಳಿದರು.
ವಿದೇಶದಲ್ಲಿರುವ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಣ ಜಮೆ ಮಾಡುವುದಾಗಿ ಹೇಳಿದ್ದರೂ, ಈವರೆಗೂ 10 ರೂ. ಸಹ ಬಂದಿಲ್ಲ. ಎಲ್ಲಾ ಗ್ರಾಮಗಳಿಗೂ ಉಚಿತ ಅಡುಗೆ ಅನಿಲ ನೀಡುವುದಾಗಿ ಭರವಸೆ ನೀಡಿದ್ದರೂ ಆದರೆ ಗ್ಯಾಸ್ಗಳೇ ಇಲ್ಲ. ಈಗಲೂ ಹಳ್ಳಿಗಳಲ್ಲಿ ಸೌದೆಯಲ್ಲಿ ಅಡುಗೆ ಮಾಡುವ ಪರಿಸ್ಥಿತಿ ಇದೆ ಎಂದು ಹೇಳಿದರು.
ರಫಾಯಲ್ ಯುದ್ಧ ವಿಮಾನ ಖರೀದಿಯಲ್ಲಿನ ಮಾಹಿತಿಯನ್ನು ಬಹಿರಂಗಪಡಿಸದೆ ಕೇಂದ್ರ ಸರ್ಕಾರ ಮುಚ್ಚಿಡುತ್ತಿದೆ. ತಂತ್ರಜ್ಞಾನ ಹಾಗೂ ಮೂಲಸೌಕರ್ಯ ಇರುವ ಬೆಂಗಳೂರಿನ ಎಚ್ಎಎಲ್ಗೆ ರಫಾಯಲ್ ಯುದ್ಧ ವಿಮಾನ ತಯಾರಿಕೆಯ ಗುತ್ತಿಗೆ ನೀಡುವ ಬದಲಾಗಿ ಪ್ರಧಾನಮಂತ್ರಿಯವರು ತಮ್ಮ ಸ್ನೇಹಿತನ ಕಂಪೆನಿಗೆ ಗುತ್ತಿಗೆಗೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.