ಜಾಹೀರಾತು ಫಲಕಗಳ ಬಗ್ಗೆ ಪಾಲಿಕೆ ಸಭೆಯಲ್ಲಿ ಪಕ್ಷಾತೀತ ಖಂಡನೆ

 

ಬೆಂಗಳೂರು, ಆ.13- ನಗರದಲ್ಲಿರುವ ಜಾಹೀರಾತು ಫಲಕಗಳೆಷ್ಟು..? ಬಂದಿರುವ ವರಮಾನವೆಷ್ಟು ಎಂಬುದರ ಬಗ್ಗೆ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಪಾಲಿಕೆಯ ವಿಶೇಷ ಸಭೆಯಲ್ಲಿಂದು ಪಕ್ಷಾತೀತವಾಗಿ ವ್ಯಾಪಕ ಖಂಡನೆ ವ್ಯಕ್ತವಾಯಿತು.
ಬಹುತೇಕ ಎಲ್ಲ ಸದಸ್ಯರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಎಂಟು ವಲಯಗಳಲ್ಲಿ ಅಧಿಕೃತ, ಅನಧಿಕೃತ ಜಾಹೀರಾತು ಫಲಕಗಳೆಷ್ಟು..? ಬಂದಿರುವ ವರಮಾನವೆಷ್ಟು ಎಂದು ಕಳೆದ 2016ರಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ್ದ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರಿಗೆ ಈವರೆಗೆ ಅಧಿಕಾರಿಗಳು ಸಮರ್ಪಕ ಉತ್ತರ ಕೊಟ್ಟಿಲ್ಲ.

ಹೈಕೋರ್ಟ್ ಜಾಹೀರಾತು ಸಂಬಂಧ ಛೀಮಾರಿ ಹಾಕಿದ ಮೇಲೆ ಚುಕ್ಕೆ ಗುರುತಿನ ಪ್ರಶ್ನೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಪದ್ಮನಾಭರೆಡ್ಡಿ ಹರಿಹಾಯ್ದರು.
ನ್ಯಾಯಾಲಯದ ಆದೇಶಕ್ಕೂ, ನನ್ನ ಪ್ರಶ್ನೆಗೂ ಸಂಬಂಧವಿಲ್ಲ. 2016ರಲ್ಲಿ ನಾನು ಪ್ರಶ್ನೆ ಕೇಳಿದ್ದೆ. ಈ-ಮೇಲ್ ಮಾಹಿತಿ ನೀಡಿದ್ದರು. ಕ್ರೋಢೀಕೃತ ಮಾಹಿತಿಯನ್ನು ಕೊಟ್ಟಿರಲಿಲ್ಲ. ಊರೆಲ್ಲ ಕೊಳ್ಳೆ ಹೊಡೆದ ಮೇಲೆ ಈಗ ಅಧಿಕಾರಿಗಳು ಮಾಹಿತಿ ಕೊಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
10 ಸಾವಿರ ಹೋರ್ಡಿಂಗ್ಸ್ ಇದೆ ಎಂದು ಮಾಹಿತಿ ನೀಡಲಾಗಿದೆ. ಅಧಿಕೃತವಾಗಿ ಎರಡೂವರೆ ಸಾವಿರ ಹೋರ್ಡಿಂಗ್ಸ್ ಮಾತ್ರ ಇದೆ. 2013 ರಿಂದ 2015ರ ವರೆಗೆ ಕೋಟ್ಯಂತರ ರೂ. ಬಾಕಿ ಇದೆ. 47 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದರೂ ಇದುವರೆಗೆ ಸಂಗ್ರಹ ಮಾಡಿಲ್ಲ. 2008-09 ಸಾಲಿನಲ್ಲಿ 18 ಕೋಟಿ ತೆರಿಗೆ ಸಂಗ್ರಹ ಮಾಡಲಾಗಿದೆ. ಅದಾದ ಬಳಿಕ ಜಾಹೀರಾತು ತೆರಿಗೆಯಲ್ಲಿ ಪಾಲಿಕೆ ಸೋತಿದೆ ಎಂದು ಹೇಳಿದರು.

ಜಾಹೀರಾತಿನಲ್ಲಿ 2 ಸಾವಿರ ಕೋಟಿಯಷ್ಟು ಅಕ್ರಮವಾಗಿದೆ ಎಂದು ರಾಜ್ಯಸರ್ಕಾರವೇ ಹೇಳಿ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿತ್ತು. ಈ ಕರ್ಮಕಾಂಡದ ಬಗ್ಗೆ ಉತ್ತರ ನೀಡಬೇಕೆಂದು ಒತ್ತಾಯಿಸಿದರು.
ಬಿಬಿಎಂಪಿಗೆ ಜಾಹೀರಾತಿನಿಂದ ಬರುತ್ತಿದ್ದ ವರಮಾನ ತಪ್ಪಿಹೋಗಲು ಅಧಿಕಾರಿಗಳೇ ನೇರ ಕಾರಣ. ಪ್ರತಿಯೊಂದು ವಾರ್ಡ್‍ನಲ್ಲೂ ಜಾಹೀರಾತುಗಳೆಷ್ಟಿವೆ ಎಂಬುದರ ಮಾಹಿತಿ ಒದಗಿಸಲು ಕೇಳಿದ್ದೆ. ಆದರೆ, ಈವರೆಗೆ ಸೂಕ್ತ ಉತ್ತರ ಬಂದಿಲ್ಲ. ಚುಕ್ಕೆ ಗುರುತಿನ ಪ್ರಶ್ನೆ ಬಗ್ಗೆ ಚರ್ಚೆಯಾಗಬೇಕು. ಇಲ್ಲದಿದ್ದರೆ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡಲು ಸಾಧ್ಯವಾಗುವುದಿಲ್ಲ ಎಂದು ಹರಿಹಾಯ್ದರು.
ಆಡಳಿತವನ್ನು ಬಿಗಿ ಮಾಡಬೇಕೆಂದರೆ ಅಧಿಕಾರಿಗಳನ್ನು ಸರಿಯಾದ ದಾರಿಗೆ ತರಬೇಕಾದರೆ ಸ್ಟಾರ್ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಡಬೇಕು. ಇಲ್ಲಿಯವರೆಗೆ ನಾನು 60 ಪ್ರಶ್ನೆಗಳನ್ನು ಕೇಳಿದ್ದೇನೆ. ಅದರಲ್ಲಿ 20 ರಿಂದ 35 ಪ್ರಶ್ನೆಗಳಿಗೂ ಸಮರ್ಪಕ ಉತ್ತರ ದೊರೆತಿಲ್ಲ ಎಂದು ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದರು. ಹಲವು ಸದಸ್ಯರು ಕೂಡ É ದನಿಗೂಡಿಸಿದರು.
ಜಾಹೀರಾತು ಸಮೀಕ್ಷೆ ನಡೆಸಲು 264 ತಂಡಗಳನ್ನು ನೇಮಿಸಿದೆ. ಇದರಿಂದಾದ ಪ್ರಯೋಜನವೇನು? ಯಾವುದೇ ನಿಖರ ಮಾಹಿತಿ ಇಲ್ಲ ಅಂದ್ರೆ ತಂಡಗಳ ಸಮೀಕ್ಷೆ ಏನಾಗಬೇಕು? ಮುಖ್ಯಮಂತ್ರಿಯವರ ಮಾತುಗಳನ್ನೇ ಅಧಿಕಾರಿಗಳು ಕೇಳುತ್ತಿಲ್ಲ. ಹೈಕೋರ್ಟ್ ಮಧ್ಯಪ್ರವೇಶ ಮಾಡದಿದ್ದರೆ ಅನಧಿಕೃತ ಫ್ಲೆಕ್ಸ್ ಹೋರ್ಡಿಂಗ್ಸ್ ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.

ಆಡಳಿತ ಪಕ್ಷದ ಮಾಜಿ ನಾಯಕ ಗುಣಶೇಖರ್ ಮಾತನಾಡಿ, 2016ರಲ್ಲಿ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಅಧಿಕಾರಿಗಳು ಈವರೆಗೆ ಉತ್ತರ ನೀಡದಿರುವುದು ಅತಿರೇಕದ ಪರಮಾವಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮೇಯರ್ ಜಿ.ಪದ್ಮಾವತಿ ಮಾತನಾಡಿ, ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಅಧಿಕಾರಿಗಳು ಸೂಕ್ತ ಉತ್ತರ ಕೊಡಬೇಕು. ನನ್ನ ಆಡಳಿತಾವಧಿಯಲ್ಲಿ ನಾನು ಇದಕ್ಕೆ ಆದ್ಯತೆ ನೀಡಿದ್ದೆ. ಮಾಸಿಕ ಸಭೆಯಂತೆ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಉತ್ತರ ಪಡೆಯಲು ವಿಶೇಷ ಸಭೆ ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಮತ್ತೆ ಮಾತನಾಡಿದ ಪದ್ಮನಾಭರೆಡ್ಡಿ ಅವರು, ಅನಧಿಕೃತ ಹೋರ್ಡಿಂಗ್ಸ್ ಸ್ಟ್ರೆಕ್ಚರ್ ತೆರವುಗೊಳಿಸಿದ್ದರ ಸಾಮಗ್ರಿಗಳ ಕಬ್ಬಿಣ ಎಲ್ಲಿ ದಾಸ್ತಾನು ಮಾಡಿದ್ದೀರಿ. ಅದನ್ನು ಹರಾಜು ಹಾಕಿದ್ದರೆ ಎಷ್ಟು ದುಡ್ಡು ಬಂದಿದೆ ಮಾಹಿತಿ ಕೊಡಿ. ಇದರಲ್ಲಿ ಕೋಟಿ ಕೋಟಿ ಹಗರಣ ನಡೆದಿದೆ. ಎಲ್ಲ ಪ್ರಶ್ನೆಗಳಿಗೂ ಪ್ರಾಮಾಣಿಕ ಉತ್ತರ ಕೊಡಿಸಿ. ತಿಪ್ಪೆ ಸಾರಿಸುವ ಕೆಲಸ ಬೇಡ ಎಂದು ಆಗ್ರಹಿಸಿದರು.
ನಿನ್ನೆ ಯಡಿಯೂರಪ್ಪ, ಆರ್.ಅಶೋಕ್ ನೇತೃತ್ವದಲ್ಲಿ ನಮ್ಮ ಪಕ್ಷದ ವತಿಯಿಂದ ಸಭೆ ನಡೆದಿದೆ. ಜಾಹೀರಾತನ್ನು ಶಾಶ್ವತವಾಗಿ ನಿಷೇಧಿಸಬೇಕಿದೆ. ಫ್ಲೆಕ್ಸ್, ಬ್ಯಾನರ್ ವಿಷಯದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಆದೇಶಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಅವರ ಆದೇಶವನ್ನು ನಾವು ಬೆಂಬಲಿಸುತ್ತೇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ