ಬೆಂಗಳೂರು, ಆ.13-ವಿಧಾನಪರಿಷತ್ತಿಗೆ ಬಿಜಾಪುರ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಉಪಚುನಾವಣೆ ವೇಳಾಪಟ್ಟಿಯನ್ನು ಭಾರತದ ಚುನಾವಣಾ ಆಯೋಗ ಪ್ರಕಟಿಸಿದೆ.
ಕೇಂದ್ರದ ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನಪರಿಷತ್ತಿನ ಸ್ಥಾನಕ್ಕೆ ಸೆ.6ರಂದು ಚುನಾವಣೆ ಘೋಷಣೆಯಾಗಿದೆ.
ಇಂದು ಅಧಿಸೂಚನೆ ಹೊರಡಿಸಲಾಗಿದ್ದು, ಇಂದಿನಿಂದಲೇ ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.
ನಾಮಪತ್ರ ಸಲ್ಲಿಸಲು ಆ.20 ಕಡೆಯ ದಿನವಾಗಿದ್ದು, ಆ.21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಪತ್ರಗಳನ್ನು ವಾಪಸ್ ಪಡೆಯಲು ಆ.23ರವರೆಗೂ ಕಾಲಾವಕಾಶವಿದ್ದು, ಸೆ.6ರಂದು ಬೆಳಗ್ಗೆ 8ರಿಂದ ಸಂಜೆ 4ಗಂಟೆವರೆಗೆ ಮತದಾನ ನಡೆಯಲಿದೆ.
ಮತ ಎಣಿಕೆ ಸೆ.11ರಂದು ನಡೆಯಲಿದ್ದು, ಉಪಚುನಾವಣೆ ಪ್ರಕ್ರಿಯೆ ಸೆ.14ರೊಳಗೆ ಪೂರ್ಣಗೊಳ್ಳಲಿದೆ. ಬಿಜಾಪುರ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.