ಕೇಂದ್ರ ಸರ್ಕಾರ ನೀಡಿರುವ ಆಮಂತ್ರಣವನ್ನು ತಿರಸ್ಕರಿಸಿದ ಖರ್ಗೆ

ನವದೆಹಲಿ,ಮಾ.1-ದೇಶದಲ್ಲಿ ತಾಂಡವವಾಡುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ ನಿಗ್ರಹಿಸುವ ನಿಟ್ಟಿನಲ್ಲಿ ಲೋಕಪಾಲ್ ನೇಮಕ ಕುರಿತು ಇಂದು ರಾಜಧಾನಿ ದೆಹಲಿಯಲ್ಲಿ ಮಹತ್ವದ ಸಭೆ ಏರ್ಪಾಟ್ಟಿದ್ದು , ಆರಂಭದಲ್ಲೇ ವಿಘ್ನಗಳು ಎದುರಾಗಿವೆ.
ಲೋಕಪಾಲ್ ನೇಮಕಾತಿ ಕುರಿತ ಆಯ್ಕೆ ಸಮಿತಿ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸುವಂತೆ ಕೇಂದ್ರ ಸರ್ಕಾರ ನೀಡಿರುವ ಆಮಂತ್ರಣವನ್ನು ಲೋಕಸಭೆಯ ಕಾಂಗ್ರೆಸ್ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ತಿರಸ್ಕರಿಸಿದ್ದಾರೆ. ಇದರೊಂದಿಗೆ ಈ ಮಹತ್ವದ ಸಭೆಯನ್ನು ಕಾಂಗ್ರೆಸ್ ಬಹಿಷ್ಕರಿಸಿದೆ.
ಈ ಸಂಬಂಧ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ತಾವು ಸಭೆಗೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಶೇಷ ಆಹ್ವಾನಿತರಾಗಿ ತಮಗೆ ನೀಡಿರುವ ಆಮಂತ್ರಣವು ಲೋಕಪಾಲ್ ಆಯ್ಕೆಯಲ್ಲಿ ವಿರೋಧ ಪಕ್ಷಗಳ ಧ್ವನಿಯನ್ನು ದಮನ ಮಾಡುವ ಪ್ರಯತ್ನವಾಗಿದೆ ಎಂದು ಖರ್ಗೆ ಪತ್ರದಲ್ಲಿ ಆರೋಪಿಸಿದ್ದಾರೆ.
ಲೋಕಪಾಲ್ ಕಾಯ್ದೆ ಪ್ರಕಾರ ಆಯ್ಕೆ ಸಮಿತಿಯಲ್ಲಿ ಓರ್ವ ಸದಸ್ಯರಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕರು ಹಾಜರಾಗಬೇಕು. ಆದರೆ ಖರ್ಗೆಯವರು ಲೋಕಸಭೆ ವಿರೋಧ ಪಕ್ಷದ ನಾಯಕರಲ್ಲ. ಹೀಗಾಗಿ ಸಮಿತಿಯಲ್ಲಿ ಅವರು ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ.
ಕಾಂಗ್ರೆಸ್ ಧುರೀಣ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಅಜಾದ್ ಅವರಿಗೆ ಸಭೆಯಲ್ಲಿ ಭಾಗವಹಿಸಲು ಅಧಿಕೃತ ಅವಕಾಶವಿದೆ. ಈ ನಿಟ್ಟಿನಲ್ಲಿ ಅವರಿಗೆ ಈ ಆಮಂತ್ರಣವನ್ನೂ ನೀಡಲಾಗಿದೆ.
ಪಕ್ಷದ ಮುತ್ಸದಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಡೆಗಣಿಸಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ವಿಶೇಷ ಆಹ್ವಾನಿತರಾಗಿ ಭಾಗವಹಿಸುವಂತೆ ಆಮಂತ್ರಣ ನೀಡಿತ್ತು.
ಆದರೆ ಇದಕ್ಕೆ ಖರ್ಗೆ ಅಪಸ್ವರ ತೆಗೆದಿದ್ದಾರೆ. ಯಾವುದೇ ಹಕ್ಕುಗಳಿಲ್ಲದೆ ಅಥವಾ ಮಾತನಾಡುವ ಅವಕಾಶವಿಲ್ಲದೆ ಕೇವಲ ಸಮಿತಿ ಸಭೆಯಲ್ಲಿ ಭಾಗವಹಿಸುವುದರಿಂದ ಏನೂ ಪ್ರಯೋಜನವಾಗದು. ಸಭೆಗೆ ನನ್ನ ಆಹ್ವಾನಿ ನನ್ನ ಅಭಿಪ್ರಾಯ ಮತ್ತು ಮತವನ್ನು ದಾಖಲಿಸುವುದು ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಇದು ವಿರೋಧ ಪಕ್ಷದ ಧ್ವನಿಯನ್ನು ದಮನ ಮಾಡುವ ಉದ್ದೇಶದಿಂದ ಕೂಡಿದೆ ಎಂದು ಖರ್ಗೆ ಪತ್ರದಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ತಾವು ವಿಶೇಷ ಆಹ್ವಾನಿತರಾಗಿ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ