ಲಂಡನ್: ಪ್ರವಾಸಿ ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿರುವ ಇಂಗ್ಲೆಂಡ್ ಇದೀಗ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲ ಟೀಂ ಇಂಡಿಯಾವನ್ನು ಅಲ್ಪ ಮೊತ್ತಕ್ಕೆ ಆಲ್ ಔಟ್ ಮಾಡಿದೆ.
ಲಂಡನ್ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿತ್ತು. ಇನ್ನು ಎರಡನೇ ದಿನದಾಟ ಆರಂಭಿಸಿದ್ದ ಟೀಂ ಇಂಡಿಯಾ 107 ರನ್ ಗಳಿಗೆ ಆಲ್ ಔಟ್ ಆಗಿತ್ತು. ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಆ್ಯಂಡರ್ಸನ್ ಮಾರಕ ಬೌಲಿಂಗ್ ದಾಳಿಗೆ ಟೀಂ ಇಂಡಿಯಾ ಆಟಗಾರರು ತತ್ತರಿಸಿದ್ದರು. ಆ್ಯಂಡರ್ಸನ್ 20 ರನ್ ಗೆ 5 ವಿಕೆಟ್ ಪಡೆದಿದ್ದರು.
ಎರಡನೇ ದಿನದಾಟದ ಬಳಿಕ ಮಾತನಾಡಿದ ಜೇಮ್ಸ್ ಆ್ಯಂಡರ್ಸನ್, ಯಾವುದೇ ಪರಿಸ್ಥಿತಿಯಲ್ಲೂ ನಾವು ಜಗತ್ತಿನ ಯಾವುದೇ ತಂಡಕ್ಕೂ ಬೇಕಾದರೂ ಮಣ್ಣು ಮುಕ್ಕಿಸುತ್ತೇವೆ ಎಂದು ಹೇಳಿದ್ದಾರೆ.
ನಮ್ಮ ತಂಡದಲ್ಲಿನ ಎಲ್ಲಾ ಆಟಗಾರರು ಅವರಲ್ಲಿನ ಸಾಮರ್ಥ್ಯವನ್ನು ಅರಿತಿದ್ದಾರೆ. ಹೀಗಾಗಿ ಎಂತಹ ಸಂದರ್ಭದಲ್ಲಾದರೂ ನಾವು ಕಠಿಣವಾಗಿ ಬೌಲಿಂಗ್ ಮಾಡುತ್ತೇವೆ. ಹೀಗಾಗಿ ನಮ್ಮ ಬೌಲಿಂಗ್ ಎದುರಿಸಲು ಜಗತ್ತಿನ ಯಾವುದೇ ತಂಡವಾದರೂ ಹೆದರುತ್ತವೆ ಎಂದು ಹೇಳಿದ್ದಾರೆ.