ಬಸ್‍ಗಳ ಮೂಲಕ ಮುಂಬೈಯಿಂದ ನಗರಕ್ಕೆ ಬರುತ್ತಿದೆ ಮಾದಕ ವಸ್ತುಗಳು

 

ಬೆಂಗಳೂರು, ಆ.12-ವಿಮಾನ, ಕೋರಿಯರ್ ಮೂಲಕ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಕಳ್ಳಸಾಗಣೆದಾರರು ಇದೀಗ ಬಸ್‍ಗಳ ಮೂಲಕ ಸುಲಭವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ಕಳ್ಳಸಾಗಣೆದಾರರು ಮಾದಕ ವಸ್ತುಗಳನ್ನು ಬಸ್‍ಗಳ ಮೂಲಕ ಮುಂಬೈಯಿಂದ ನಗರಕ್ಕೆ ಸಾಗಿಸುತ್ತಿರುವುದು ಇತ್ತೀಚೆಗೆ ಪತ್ತೆಯಾದ ಹಲವು ಪ್ರಕರಣಗಳಲ್ಲಿ ಪೆÇಲೀಸರ ಗಮನಕ್ಕೆ ಬಂದಿದೆ.
ಕಳೆದ 15 ದಿನಗಳಲ್ಲಿ ನಗರ ಪೆÇಲೀಸರು ಕೋಕೈನ್ ಸೇರಿದಂತೆ ಬೃಹತ್ ಪ್ರಮಾಣದ ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 57 ವರ್ಷ ಪ್ರಾಯದ ನೈಜೀರಿಯಾ ಪ್ರಜೆಯೊಬ್ಬನನ್ನು ಗುರುವಾರ ನಗರ ಪೆÇಲೀಸರು ಯಶವಂತಪುರದಲ್ಲಿ ಸೆಮಿ ಸ್ಲೀಪರ್ ಬಸ್‍ನಲ್ಲಿ ವಶಕ್ಕೆ ಪಡೆದಿದ್ದಾರೆ. ಆತನ ಬ್ಯಾಗ್ ಪರಿಶೀಲಿಸಿದಾಗ 3.2 ಲಕ್ಷ ರೂ.ಮೌಲ್ಯದ 13 ವಿಧದ 4.2 ಕಿ.ಲೋ ಮಾದಕ ವಸ್ತುಗಳು ಪತ್ತೆಯಾಗಿದ್ದವು.
ಬಂಧಿತ ಆಸ್ಕರ್ ಅಲಿಯಾಸ್ ಒಸಿತಾ ಚಿನಕಾ ಮುಂಬೈಯಿಂದ ಬಸ್ ಮೂಲಕ ಮಾದಕ ವಸ್ತುಗಳನ್ನು ತಂದು ಬೆಂಗಳೂರಿನ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ. ಈತನ ಬಂಧನದೊಂದಿಗೆ ಕಳ್ಳಸಾಗಣೆದಾರರು ಸಾಮಾನ್ಯ ಬಸ್‍ಗಳ ಮೂಲಕ ನಗರಕ್ಕೆ ಗಾಂಜಾ ಪೂರೈಸುತ್ತಿರುವುದು ಬೆಳಕಿಗೆ ಬಂದಿದೆ.
ಬಸ್‍ನಲ್ಲಿ ಮಾದಕ ವಸ್ತುಗಳನ್ನು ಸಾಗಿಸುವುದು ಸುಲಭದ ಕೆಲಸ. ಮುಂಬೈಯಲ್ಲಿ ಬಸ್ ಹತ್ತಿದರೆ ಬೆಂಗಳೂರು ತಲುಪುವವರೆಗೆ ಯಾರೂ ತಪಾಸಣೆ ಮಾಡುವುದಿಲ್ಲ ಎಂಬ ಧೈರ್ಯದಿಂದ ಈ ಮಾರ್ಗ ಆರಿಸಿಕೊಂಡಿದ್ದಾರೆ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ.
ಆಗಸ್ಟ್ 1ರಂದು ಮಡಿವಾಳ ಬಸ್ ನಿಲ್ದಾಣದ ಬಸ್ಸೊಂದರಿಂದ ಡಾರ್ಜಿಲಿಂಗ್ ಮೂಲದ ಮಹಿಳೆ ಗ್ರೇಸ್ ಜಾಯ್ ಎಂಬಾಕೆಯನ್ನು ಪೆÇಲೀಸರು ವಶಕ್ಕೆ ಪಡೆದರು. ಅವರ ಬ್ಯಾಗ್ ಪರಿಶೀಲಿಸಿದಾಗ ಮೂರು ನೂಡಲ್ಸ್ ಪ್ಯಾಕ್ ದೊರೆಯಿತು. ಅದನ್ನು ತೆರೆದು ನೋಡಿದಾಗ 1.2 ಕೋಟಿ ರೂ. ಮೌಲ್ಯದ ಕೋಕೆನ್, 50 ಸಾವಿರ ರೂ.ಮೌಲ್ಯದ ಕೇಟ್‍ಮೆನ್ ಎಂಬ ಮಾದಕ ವಸ್ತುಗಳು ಲಭ್ಯವಾದವು. ಈಕೆ ಕೂಡ ಮುಂಬೈಯಿಂದ ಬಸ್ ಮೂಲಕ ಮಾದಕ ವಸ್ತುಗಳನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದುದು ಬಳಿಕ ತನಿಖೆಯಿಂದ ಬೆಳಕಿಗೆ ಬಂತು.
ವಿಮಾನದ ಮೂಲಕ, ಕೋರಿಯರ್ ಮೂಲಕ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಕಳ್ಳಸಾಗಣೆದಾರರ ತಂತ್ರವನ್ನು ಭೇದಿಸುವಲ್ಲಿ ಪೆÇಲೀಸರು ಯಶಸ್ವಿಯಾದ ನಂತರ ಬಸ್ ಮಾರ್ಗದ ಮೂಲಕ ಅವುಗಳನ್ನು ಸಾಗಿಸುವ ದಾರಿ ಹಿಡಿದಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಸಿಸಿಬಿ ಅಧಿಕಾರಿಗಳು ಸರ್ಕಾರಿ ಮತ್ತು ಖಾಸಗಿ ಬಸ್‍ಗಳ ಪ್ರಯಾಣಿಕರ ಮೇಲೆ ನಿಗಾ ಇಟ್ಟು ಅವರ ಬ್ಯಾಗ್‍ಗಳನ್ನು ತಪಾಸಣೆ ಮಾಡುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ