ನಾಸಾದಿಂದ ಸೂರ್ಯ ಶಿಕಾರಿ: ಸೋಲಾರ್ ಪ್ರೋಬ್ ನೌಕೆ ಉಡಾವಣೆ ಯಶಸ್ವಿ

ವಾಷಿಂಗ್ಟನ್: ಸೂರ್ಯನ ಮೇಲ್ಮೈ ಪ್ರದೇಶದ ಅಧ್ಯಯನಕ್ಕಾಗಿ ಅಮೆರಿಕದ ನಾಸಾ ರೂಪಿಸಿದ `ಪಾರ್ಕರ್ ಸೋಲಾರ್ ಪ್ರೋಬ್’ ನೌಕೆಯ ಉಡಾವಣೆ ಯಶಸ್ವಿಯಾಗಿದೆ.

ಫ್ಲೋರಿಡಾದ ಕೇಪ್ ಕೆನವರಾಲ್‍ನಿಂದ ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆ 1 ನಿಮಿಷಕ್ಕೆ ಡೆಲ್ಟಾ -4 ಹೆಸರಿನ ರಾಕೆಟ್ ಸೋಲಾರ್ ಪ್ರೋಬ್ ಅನ್ನು ಹೊತ್ತುಕೊಂಡು ಬಾಹ್ಯಾಕಾಶಕ್ಕೆ ಚಿಮ್ಮಿದೆ. ಶನಿವಾರ ಮಧ್ಯಾಹ್ನ 1.3ಕ್ಕೆ ನಿಗದಿಯಾಗಿದ್ದರೂ ಮತ್ತೆ ಭಾರತೀಯ ಕಾಲಮಾನ ಮಧ್ಯಾಹ್ನ 2.8ಕ್ಕೆ ನಿಗದಿಯಾಗಿತ್ತು. ನಂತರ ಈ ಉಡಾವಣಾ ಸಮಯವನ್ನು ನಾಸಾ ಭಾನುವಾರಕ್ಕೆ ಮುಂದೂಡಿಕೆ ಮಾಡಿತ್ತು.

ಸೋಲಾರ್ ಪಾರ್ಕರ್ ನೌಕೆ ಸೂರ್ಯನ ನಾಭಿಯಿಂದ 61 ಲಕ್ಷ ಕಿ. ಮೀ ಸಮೀಪ ಸಾಗಲಿದೆ. ಸೂರ್ಯನ ಬಳಿ ತಲುಪಿದ 7 ವರ್ಷಗಳ ಅವಧಿಯಲ್ಲಿ 24 ಬಾರಿ ಈ ನೌಕೆ ಹಾದು ಹೋಗಲಿದೆ. ಒಂದು ಸೆಕೆಂಡಿಗೆ ಅಂದಾಜು 200 ಕಿ.ಮೀ ವೇಗದಲ್ಲಿ ಸಾಗುವ ನೌಕೆ ಗಂಟೆಗೆ 7 ಲಕ್ಷ ಕಿ.ಮೀ ವೇಗದಲ್ಲಿ ಸೂರ್ಯನ ಸಮೀಪ ಹಾದು ಹೋಗುವಂತೆ ನಿರ್ಮಿಸಲಾಗಿದೆ. ಹೀಗಾಗಿ ಅತಿ ವೇಗದ ಮಾನವ ನಿರ್ಮಾಣ ವಾಹನವೆಂಬ ಖ್ಯಾತಿಯನ್ನು ಸೋಲಾರ್ ಪ್ರೋಬ್ ನೌಕೆ ಪಡೆದಿದೆ. ಈ ವಿಶೇಷ ಅಧ್ಯಯನಕ್ಕೆ ಅಮೆರಿಕ ಸರ್ಕಾರ 10 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ.

ಸೂರ್ಯನ ಶಾಖದಿಂದ ನೌಕೆ ಸುಟ್ಟು ಹೋಗದೇ ಇರಲು ಕಾರ್ಬನ್ ಹೀಟ್ ಶೀಲ್ಡ್‍ಗಳನ್ನು ಬಳಸಲಾಗಿದೆ. ಹೊರಭಾಗದಲ್ಲಿ 1370 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇದ್ದರೆ, ಒಳಭಾಗದಲ್ಲಿ ಕೇವಲ 30 ಡಿಗ್ರಿ ಸೆಲ್ಸಿಯಸ್ ಇರುವಂತೆ ನೌಕೆಯನ್ನು ವಿನ್ಯಾಸ ಮಾಡಲಾಗಿದೆ. ವಿದ್ಯುತ್‍ಗಾಗಿ ಸೌರ ಪ್ಯಾನೆಲ್‍ಗಳನ್ನು ಬಳಸಲಾಗಿದೆ.

60 ವರ್ಷದ ಹಿಂದೆ ಅಮೆರಿಕದ ಭೌತಶಾಸ್ತ್ರ ವಿಜ್ಞಾನಿ ಯೂಜಿನ್ ಪಾರ್ಕರ್ ಸೌರ ಮಾರುತದ ಇರುವುಕೆಯ ಬಗ್ಗೆ ತಿಳಿಸಿದ್ದರು. ಹೀಗಾಗಿ ಈ ಮಹತ್ವಾಕಾಂಕ್ಷಿ ಯೋಜನೆಗೆ ಅವರ ಹೆಸರನ್ನು ಇಡಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ