ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಸೈಲೈಂಟಾಗಿ ಮೈತ್ರಿ ಆಗಿದ್ದವು: ಎಚ್. ವಿಶ್ವನಾಥ್

ಮೈಸೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಳಗೊಳಗೆ ಮೈತ್ರಿ ಮಾಡಿಕೊಂಡಿದ್ದವು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಆರೋಪಿಸಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿರುವುದು ಕೇವಲ ಮಾತಿನ ಸರ್ಕಾರವಷ್ಟೇ. ಇಲ್ಲಿಯವರೆಗೂ ಕಾಮ್ ಕಿ ಬಾತ್ (ಕೆಲಸಗಳು) ಆಗುತ್ತಲೆ ಇಲ್ಲ. ಬರೀ ಮಾತಿನ ಆಡಳಿತ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಸರ್ವಾಧಿಕಾರಿಯ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಅಲ್ಲದೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯು ಒಳಗೊಳಗೆ ಮೈತ್ರಿ ಮಾಡಿಕೊಂಡಿದ್ದವು. ಎಂ.ಬಿ.ಪಾಟೀಲ್ ಅವರನ್ನು ಗೆಲ್ಲಿಸೋಕೆ ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಮೈತ್ರಿ ಮಾಡಿಕೊಂಡಿದ್ದವು ಎಂದು ಗಂಭೀರವಾಗಿ ಆರೋಪಿಸಿದರು.

ಕಾಂಗ್ರೆಸ್ಸಿನವರೇ ನೀವು ಸೆಕ್ಯೂಲರ್ ಆಗಿಯೇ ಇರಿ, ಅದನ್ನು ನೀವೂ ಯಾವತ್ತು ಮಿಕ್ಸ್ ಮಾಡಬೇಡಿ. ಕಾಂಗ್ರೆಸ್ ಸೆಕ್ಯೂಲರ್ ಪಾರ್ಟಿ ಎಂದು ಕಾಂಗ್ರೆಸ್ಸಿಗೆ ಬುದ್ಧಿಮಾತು ಹೇಳಿದರು. ಅಲ್ಲದೇ ಈ ಮೊದಲು ನೀವು ನಮ್ಮನ್ನು ಬಿಜೆಪಿಯ ಬಿ ಟೀಮ್ ಎಂದು ಕರೆದಿದ್ದಿರಿ, ನಾವು ಬಿಜೆಪಿ ಜೊತೆ ಹೋಗಿ ಸರ್ಕಾರ ರಚನೆ ಮಾಡಿಲ್ಲವೆಂದು ಪರೋಕ್ಷವಾಗಿ ಕಾಂಗ್ರೆಸ್ಸನ್ನು ಟೀಕಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತೇನೆ. ಅವರು ನೂರು ವರ್ಷ ಚೆನ್ನಾಗಿರಲಿ, ಅಲ್ಲದೇ ಇನ್ನು ಮುಂದೆ ಅವರು ರಾಷ್ಟ್ರೀಯ ನಾಯಕರಾಗಿ ಬೆಳೆಯಲಿ ಎಂದು ಹಾರೈಸಿ, ನಿಮಗೆ ಇದಕ್ಕಿಂತ ಬೇರೆನಾದರೂ ಬೇಕಾ, ಸದ್ಯ ನಮ್ಮ ನಡುವಿನ ಸಂಬಂಧ ಈಗ ಹೇಗಿದೆ ಎಂದು ವ್ಯಂಗ್ಯವಾಗಿ ಉತ್ತರಿಸಿದರು.

ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ದುಂದು ವೆಚ್ಚ ವಿಚಾರ ಕುರಿತು ಬಿಜೆಪಿಗೆ ತಿರುಗೇಟು ನೀಡಿದ ಅವರು, ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ದೇಶ-ವಿದೇಶಗಳ ಅತಿಥಿಗಳನ್ನು ಆಹ್ವಾನಿಸಲಾಗಿತ್ತು, ಆಗಲೂ ಸಾರ್ವಜನಿಕರ ಹಣವನ್ನು ಬಳಕೆ ಮಾಡಿಕೊಂಡಿಲ್ಲವೇ ಹಾಗೂ ಅಂದಿನ ಖರ್ಚನ್ನ ಖುದ್ದು ಮೋದಿ ಜೇಬಿನಿಂದ ಮಾಡಿದ್ದಾರ ಎಂದು ಬಿಜೆಪಿ ನಾಯಕರಿಗೆ ಪ್ರಶ್ನಿಸಿದರು.

ಶಾದಿ ಭಾಗ್ಯಕ್ಕೆ ಅನುದಾನವನ್ನು ನಮ್ಮ ಸರ್ಕಾರ ಕಡಿಮೆ ಮಾಡಿಲ್ಲ. ಹಿಂದಿನ ಸರ್ಕಾರ ತನ್ನ ಕೊನೆ ಬಜೆಟ್ ನಲ್ಲಿ ಅನುದಾನ ಕಡಿಮೆ ಮಾಡಿತ್ತು. ಆದರೆ ಅದನ್ನು ಈಗ ನಮ್ಮ ತಲೆಗೆ ಯಾಕೆ ಕಟ್ಟುತ್ತಿದ್ದೀರಿ ಎಂದು ಪ್ರಶ್ನಿಸಿ, ನಾವೇನೂ ಅನುದಾನ ಕಡಿತ ಮಾಡಿಲ್ಲ. ಒಮ್ಮೆ ಬಜೆಟ್ ಪುಸ್ತಕ ನೋಡಿ ಆರೋಪ ಮಾಡಿ. ಅನ್ನಭಾಗ್ಯದ ಅಕ್ಕಿ ಕಡಿಮೆ ಮಾಡಿದ್ದಕ್ಕೆ ಸಮರ್ಥನೆ ನೀಡಿದ ಅವರು, ಹಿಂದಿನ ಸರ್ಕಾರ ಚುನಾವಣಾ ದೃಷ್ಟಿಯಿಂದ 25 ಲಕ್ಷ ಹೆಚ್ಚುವರಿ ಕಾರ್ಡ್ ಅನ್ನು ಬೇಕಾಬಿಟ್ಟಿಯಾಗಿ ಹಂಚಿತ್ತು. ಹೀಗಾಗಿ ಅಕ್ಕಿ ಕಡಿಮೆ ಮಾಡಬೇಕಾದ ಅನಿರ್ವಾಯತೆಯಿಂದ ಅಕ್ಕಿ ಮಾಡಿದ್ದೇವೆ ಎಂದರು.

ಇದೇ ವೇಳೆ ಪ್ರಜ್ವಲ್ ರೇವಣ್ಣ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಮಾತನಾಡಿ, ಪ್ರಜ್ವಲ್ ರೇವಣ್ಣ ಒಬ್ಬ ನಿಷ್ಠಾವಂತ ನಾಯಕರಾಗಿದ್ದಾರೆ. ಅವರಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಮೇಲೆ ಒಳ್ಳೆಯ ಹಿಡಿತ ಇದೆ. ಆದುದರಿಂದ ಅಂತಹ ನಾಯಕರು ನಮ್ಮ ಪಕ್ಷಕ್ಕೆ ಬೇಕು. ಕೇವಲ ಅವರನ್ನು ದೇವೇಗೌಡರ ಮೊಮ್ಮಗ ಅನ್ನೋದನ್ನ ಪಕ್ಕಕ್ಕೆ ಸರಿಸಿ ಮಾತನಾಡಿ. ಅಲ್ಲದೇ ನನ್ನ ಅವಧಿಯಲ್ಲಿ ಪಕ್ಷದಲ್ಲಿ ಅವರ ಪಾತ್ರ ಇನ್ನೂ ಚೆನ್ನಾಗಿ ಇರಲಿದೆ ಎಂದು ಹೇಳಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ