ಭಾರೀ ಮಳೆ: ಕಾಫಿ, ಅಡಿಕೆ, ಕಾಳುಮೆಣಸು ಶೇ.50ರಷ್ಟು ನಾಶ; ನಷ್ಟ ಭರಿಸಬೇಕೆಂದು ಆಗ್ರಹ

 

ಬೆಂಗಳೂರು, ಆ.11- ಈ ಬಾರಿ ಮಲೆನಾಡಿನಲ್ಲಿ ಸುರಿದ ಭಾರೀ ಮಳೆಯಿಂದ ಕಾಫಿ, ಅಡಿಕೆ, ಕಾಳುಮೆಣಸು ಶೇ.50ರಷ್ಟು ನಾಶವಾಗಿ ರೈತರು ಕಂಗಾಲಾಗಿದ್ದಾರೆ.
ಸರ್ಕಾರ ಮಧ್ಯಪ್ರವೇಶಿಸಿ ನಷ್ಟ ಭರಿಸಬೇಕೆಂದು ಶಾಸಕ ಟಿ.ಡಿ.ರಾಜೇಗೌಡ ಆಗ್ರಹಿಸಿದ್ದಾರೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮಲೆನಾಡಿನ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದೆ. ಮನೆಗಳು, ರಸ್ತೆಗಳು, ಸೇತುವೆಗಳು ಹಾಳಾಗಿವೆ. ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಪುನರ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು, ಕೃಷಿಕರ ನೆರವಿಗೆ ಧಾವಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಾಫಿ, ಕಾಳು ಮೆಣಸು, ಅಡಿಕೆ ಬೆಳೆಗಳನ್ನು ನಂಬಿ ಬದುಕುತ್ತಿರುವ ರೈತರು ಆತಂಕಕ್ಕೀಡಾಗಿದ್ದಾರೆ. ಅವರಿಗೆ ತಕ್ಷಣದ ಪರಿಹಾರವನ್ನು ನೀಡಬೇಕಾಗಿದೆ.
ಭಾರೀ ಮಳೆ ಗಾಳಿ ಯಿಂದ ಅಡಿಕೆ ಮರಗಳು ಮುರಿದು ಬಿದ್ದಿದ್ದು, ಅಲ್ಲದೆ ಕೊಳೆ ರೋಗ ಬಂದು ಮರದಲ್ಲೇ ಹಸಿ ಅಡಿಕೆ ಕೊಳೆತು ಉದುರುತ್ತಿದೆ. ಜೊತೆಗೆ ಮೆಣಸು ಹಾಗು ಕಾಫಿ ಸಹ ಗಾಳಿಯ ಆರ್ಭಟಕ್ಕೆ ಸಂಪೂರ್ಣ ನಾಶವಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೃಷಿ ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿರುವುದಾಗಿ ಅವರು ತಿಳಿಸಿದರು.

ಮಲೆನಾಡಿನಲ್ಲಿ ವರ್ಷಧಾರೆಯಿಂದ ಸಾವು-ನೋವುಗಳು ಕೂಡ ಸಂಭವಿಸಿವೆ. ಮೃತರ ಕುಟುಂಬಗಳಿಗೆ ಪರಿಹಾರವನ್ನು ಸರ್ಕಾರ ಒದಗಿಸಬೇಕು. ಅತಿ ಹೆಚ್ಚು ಮಳೆ ಬಿದ್ದು ಹಾನಿಗೀಡಾದ ಪ್ರದೇಶವನ್ನು ಹಸಿರು ಬರ ಪ್ರದೇಶವೆಂದು ಘೋಷಿಸಿ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ