ಬೆಂಗಳೂರು, ಆ.11- ಎಲ್ಲ 198 ಬಿಬಿಎಂಪಿ ಸದಸ್ಯರು ಪಕ್ಷಭೇದ ಮರೆತು ಫ್ಲೆಕ್ಸ್ ಮುಕ್ತ ಬೆಂಗಳೂರಿಗೆ ಸಹಕಾರ ನೀಡುತ್ತಾರೆ ಎಂದು ಮೇಯರ್ ಸಂಪತ್ರಾಜ್ ಇಂದಿಲ್ಲಿ ಭರವಸೆ ನೀಡಿದರು.
ಆಡಳಿತ ಪಕ್ಷದ ನಾಯಕ ಶಿವರಾಜ್ ಮತ್ತಿತರರೊಂದಿಗೆ ಗಾಂಧಿನಗರದ ವಾರ್ಡ್ ನಂ.94ರ ವೈ.ರಾಮಚಂದ್ರ ರಸ್ತೆಯಲ್ಲಿ ಭಿತ್ತಿಪತ್ರ ಹಾಗೂ ಗೋಡೆ ಬರಹ ಅಳಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಫ್ಲೆಕ್ಸ್ ಮುಕ್ತಗೊಳಿಸಲು ಹಾಗೂ ಗೋಡೆ ಬರಹ ಅಳಿಸಲು ಹೈಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ರಜಾದಿನವಾದರೂ ನಾವು ಎರಡು ದಿನಗಳ ಕಾಲ ಇಡೀ ನಗರದಾದ್ಯಂತ ಫ್ಲೆಕ್ಸ್ ತೆರವುಗೊಳಿಸುವ ಹಾಗೂ ಗೋಡೆ ಬರಹ ಅಳಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದರು.
ಎಲ್ಲ 198 ಸದಸ್ಯರಿಗೂ ಫ್ಲೆಕ್ಸ್ ಮುಕ್ತ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದೇನೆ. ಪಕ್ಷಭೇದ ಮರೆತು ಎಲ್ಲರೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಒಟ್ಟಾರೆ ಬೆಂಗಳೂರನ್ನು ಫ್ಲೆಕ್ಸ್ಮುಕ್ತಗೊಳಿಸಲು ನಾವು ಎಲ್ಲ ಸಹಕಾರ ನೀಡುತ್ತೇವೆ ಎಂದು ಮೇಯರ್ ಹೇಳಿದರು.
ಈ ತೆರವು ಕಾರ್ಯಾಚರಣೆಯಲ್ಲಿ ಬಿಬಿಎಂಪಿಯ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಪಾಲ್ಗೊಂಡಿದ್ದಾರೆ. ಒಂದು ವಾರದೊಳಗೆ ನಗರದೆಲ್ಲೆಡೆ ಇರುವ ಫ್ಲೆಕ್ಸ್ ಹಾಗೂ ಬ್ಯಾನರ್ಗಳನ್ನು ತೆರವು ಮಾಡುತ್ತೇವೆ ಎಂದು ಸಂಪತ್ರಾಜ್ ವಿವರಿಸಿದರು.
ಒಂದು ವಾರದ ನಂತರ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಹಾಕಿದರೆ ಅಥವಾ ಗೋಡೆ ಬರಹ ಬರೆಯುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ದಂಡ ವಿಧಿಸುವ ವಿಚಾರ ಹೈಕೋರ್ಟ್ ಮುಂದಿದ್ದು, ನ್ಯಾಯಮೂರ್ತಿಗಳು ಸೂಚಿಸುವ ಆಧಾರದ ಮೇಲೆ ದಂಡ ವಿಧಿಸಲಾಗುವುದು.
ದಂಡ ವಿಧಿಸುವ ಬಗ್ಗೆ ನ್ಯಾಯಾಲಯ ಸೂಚನೆ ನೀಡದಿದ್ದರೆ ಕೆಎಂಸಿ ಕಾಯ್ದೆ ಪ್ರಕಾರ ನಗರದ ಅಂದಗೆಡಿಸುವವರಿಗೆ ದಂಡ ವಿಧಿಸಲಾಗುವುದು ಎಂದು ಅವರು ವಿವರಿಸಿದರು.