ಬೆಂಗಳೂರು: ವಿಮೆ ಮಾಡಿಸದ ವಾಹನ ಅಪಘಾತವಾದಾಗ ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ವಾಹನದ ಮಾಲೀಕರೇ ಭರಿಸಬೇಕು ಎಂದು ರಾಜ್ಯ ಸರಕಾರ ಆ.9ರಂದು ಸುತ್ತೋಲೆ ಹೊರಡಿಸಿದೆ.
ಮೋಟಾರು ವಾಹನ ಕಾಯಿದೆ 1988ರ ಕಲಂ 196 ಪ್ರಕಾರ ವಿಮೆ ಇಲ್ಲದ ವಾಹನಗಳು ರಸ್ತೆಯಲ್ಲಿ ಚಲಿಸುವಂತಿಲ್ಲ. ಸುಪ್ರೀಂಕೋರ್ಟ್ ಸಿವಿಲ್ ಅಪೀಲು ಪ್ರಕರಣದಲ್ಲಿ ಮೋಟಾರು ವಾಹನ ಕಾಯಿದೆ ಪ್ರಕಾರ, ಒಂದು ವೇಳೆ ಈ ರೀತಿಯ ವಿಮೆ ಮಾಡಿಸದ ವಾಹನಗಳು ರಸ್ತೆಯಲ್ಲಿ ಸಂಚರಿಸಿ ಅದರಿಂದ ಅಪಘಾತ ಉಂಟಾದಲ್ಲಿ ಹಾನಿಗೊಳಗಾದ ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ಸಂಬಂಧಪಟ್ಟ ವಾರಸುದಾರರಿಂದ ಪಾವತಿಸುವ ಜವಾಬ್ದಾರಿ ಆಯಾ ರಾಜ್ಯ ಸರಕಾರದ ಜವಾಬ್ದಾರಿ ಎಂದು 2018ರ ಮಾ.26ರಂದು ತಿಳಿಸಿದೆ.
ಸುಪ್ರೀಂ ಕೋರ್ಟ್‌ನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿರುವ ಕಾರಣ, ಎಲ್ಲ ವಾಹನ ಸವಾರರು ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳುವಂತೆ ಪೊಲೀಸ್ ಇಲಾಖೆಯ ಸಂಪರ್ಕ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಿಂದ ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.