ಕರ್ನಾಟಕಕ್ಕೆ ಪ್ರವಾಹ ಭೀತಿ; ಕೇಂದ್ರ ಹವಾಮಾನ ಇಲಾಖೆಯಿಂದ ಎಚ್ಚರಿಕೆಯ ಸಂದೇಶ

ಬೆಂಗಳೂರು: ನೆರೆಯ ಕೇರಳ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಕರ್ನಾಟಕದಲ್ಲಿಯೂ ಪ್ರವಾಹ ಭೀತಿ ಉಂಟಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ಸಂದೇಶವನ್ನು ಕೇಂದ್ರ ಹವಾಮಾನ ಇಲಾಖೆ ರಾಜ್ಯಕ್ಕೆ ಕಳುಹಿಸಿದೆ.

ಒಟ್ಟು ಒಂಬತ್ತು ರಾಜ್ಯಗಳಲ್ಲಿ ಪ್ರವಾಹ ಭೀತಿ ಉಂಟಾಗುವ ಸಾಧ್ಯತೆಗಳಿವೆ. ಇಂದಿನಿಂದ ದಿನಾಂಕ 15ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಈ ಸಂಬಂಧ ರಾಜ್ಯ ಸರ್ಕಾರಗಳು ಎಚ್ಚರಿಕೆಯಿಂದ ಇರಬೇಕು ಎಂಬ ಸಂದೇಶವನ್ನು ರವಾನಿಸಲಾಗಿದೆ.

ವೀಕೆಂಡ್ ಎಂದು ಜಾಲಿ ಟ್ರಿಪ್ ಹೋಗುದನ್ನು ಆದಷ್ಟು ಕಡಿತಗೊಳಿಸಬೇಕು. ನದಿ ಪಾತ್ರದ ಪ್ರದೇಶ, ಫಾಲ್ಸ್, ಕರಾವಳಿ ಭಾಗದ ಕಡೆ ವೀಕೆಂಡ್ ಪ್ರವಾಸ ಕೈಗೊಳ್ಳುವುದನ್ನು ನಿಲ್ಲಿಸುವುದು ಉತ್ತಮ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದಿನಿಂದ ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಪ್ರವಾಸ ಚಂಡಮಾರುತದ ಸಾಧ್ಯತೆ ಇದೆ.

ರಾಜ್ಯದಲ್ಲಿ ಶುಕ್ರವಾರವಷ್ಟೇ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಆರ್ಭಟಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ನೇತ್ರಾವತಿ, ಕುಮಾರಧಾರ, ಫಲ್ಗುಣಿ ತುಂಬಿ ಹರಿಯುತ್ತಿದೆ. ಹೀಗಾಗಿ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮೈಸೂರು ಭಾಗದಲ್ಲಿ ಮಳೆಯ ಪ್ರಮಾಣ ತಗ್ಗಿದರೂ, ನದಿಗಳ ನೀರಿನ ಮಟ್ಟ ಇಳಿಕೆಯಾಗಿಲ್ಲ. ನಂಜನಗೂಡು ಸಮೀಪದ ಕಪಿಲಾ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮೈಸೂರು-ಊಟಿ ಹೈವೇ ಜಲಾವೃತಗೊಂಡಿದ್ದು, ಸಂಪರ್ಕ ಕಡಿತವಾಗಿದೆ.

ರಾಷ್ಟ್ರೀಯ ಹೆದ್ದಾರಿ 766ರಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ನಂಜನಗೂಡು ದೇವಾಲಯದ ಸ್ನಾನಘಟ್ಟ, 16 ಕಾಲು ಮಂಟಪ ಮುಳುಗಡೆಯಾಗಿದೆ. ಸುತ್ತೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸುತ್ತೂರು ಸೇತುವೆ ಸಂಪೂರ್ಣ ಮುಳುಗಡೆ ಆಗಿದೆ. ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದೆ.

ಕರ್ನಾಟಕ ಮತ್ತು ಕೇರಳದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗ್ತಿದ್ದು, ಇನ್ನು ಮೂರು ದಿನ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಈಗಾಗಲೇ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದು, ನದಿಗಳು ಅಪಾಯದ ಮಟ್ಟ ಮೀರಿವೆ. ಕಬಿನಿ ಜಲಾಶಯದಲ್ಲಿ ನೀರಿನ ಒಳಹರಿವು ಅಧಿಕವಾಗಿದ್ದು, ಸದ್ಯ 80 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗ್ತಿದೆ. ಹೊರ ಹರಿವು 1 ಲಕ್ಷ ಕ್ಯೂಸೆಕ್ ದಾಟುವ ಸಾಧ್ಯತೆ ಇದ್ದು, ಕಾವೇರಿ ನದಿ ಪಾತ್ರದ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ