ಬೀದರ್/ಮೈಸೂರು, ಆ.9- ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಪ್ರವಾಸ ರಾಜ್ಯದ ಮೂರು ಭಾಗಗಳಿಂದ ಏಕಕಾಲಕ್ಕೆ ಆರಂಭಗೊಂಡಿದೆ.
ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬೀದರ್ನಲ್ಲಿ ಪ್ರವಾಸ ಆರಂಭಿಸಿದರೆ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ತಂಡ ಶಿವಮೊಗ್ಗದಲ್ಲಿ ಪ್ರವಾಸ ಆರಂಭಿಸಿದೆ. ಇತ್ತ ಮೈಸೂರಿನಲ್ಲಿ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಮೂರನೇ ತಂಡ ಪ್ರವಾಸ ಆರಂಭಿಸಿದೆ.
ಬೀದರ್ನಲ್ಲಿ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ರಾಜ್ಯ ಸರ್ಕಾರ ಸಾಲ ಮನ್ನಾ ಮಾಡುವ ವಿಷಯದಲ್ಲಿ ಬದ್ಧತೆ ಪ್ರದರ್ಶಿಸುತ್ತಿಲ್ಲ. ಅಧಿಕಾರಕ್ಕೆ ಬಂದ ದಿನದಿಂದ ಸಾಲ ಮನ್ನಾ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ, ಆದರೆ ಇದುವರೆಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ರಾಷ್ಟ್ರೀಕೃತ ಬ್ಯಾಂಕ್ನ ಸಾಲ ಮನ್ನಾ ವಿಷಯ ಇನ್ನೂ ಚರ್ಚೆಯಲ್ಲೇ ಇದೆ. ಸಹಕಾರಿ ಬ್ಯಾಂಕ್ನ ಸಾಲ ಮನ್ನಾ ಆದೇಶ ಇನ್ನೂ ಹೊರಡಿಸಿಲ್ಲ. ಇದರಿಂದ ರೈತರು ಖಾಸಗಿಯವರಿಂದ ಸಾಲ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಬೇಗ ಸರ್ಕಾರ, ನೀಡಿದ ಭರವಸೆಯಂತೆ ಸಾಲ ಮನ್ನಾ ಮಾಡಿ ರೈತರನ್ನು ಋಣಮುಕ್ತರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ರಾಜ್ಯ ಪ್ರವಾಸಕ್ಕೂ ಬಿಜೆಪಿ ಪ್ರವಾಸಕ್ಕೂ ಸಂಬಂಧವಿಲ್ಲ. ರಾಹುಲ್ ಗಾಂಧಿ ಇಲ್ಲಿಗೆ ಪ್ರವಾಸ ಬಂದಾಗ ಇಲ್ಲಿನ ಹಗರಣಗಳ ಬಗ್ಗೆಯೂ ಮಾತನಾಡಬೇಕು. ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆಯೂ ಹೇಳಬೇಕು. ರಾಜ್ಯ ಸರ್ಕಾರದ ಕಿವಿ ಹಿಂಡಬೇಕು ಎಂದು ಸಲಹೆ ನೀಡಿದರು.
ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಮೀಲಾಗಿ ಹಗಲು ದರೋಡೆಯಲ್ಲಿ ತೊಡಗಿದೆ. ಇದನ್ನು ನಿಲ್ಲಿಸಲು ರಾಹುಲ್ ಗಾಂಧಿ ಪ್ರಯತ್ನಿಸಿದರೆ ಅವರ ರಾಜ್ಯ ಭೇಟಿ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಶಾಸಕರು ಪಕ್ಷ ಬಿಟ್ಟು ಹೋಗುವ ಭಯ ಈಶ್ವರ್ ಖಂಡ್ರೆ ಅವರಿಗೆ ಕಾಡುತ್ತಿರಬಹುದು. ಈ ಹಿನ್ನೆಲೆಯಲ್ಲಿ ಅವರು ಮಾತನಾಡಿರಬಹುದು. ಇದಕ್ಕೆಲ್ಲಾ ಕಾಲವೇ ಉತ್ತರ ನೀಡಲಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.