ಬೆಂಗಳೂರು, ಆ.9-ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರಕು ಮತ್ತು ಸೇವಾ ತೆರಿಗೆ ಕುರಿತ ಪರಿಪೂರ್ಣ ಮಾಹಿತಿ ಒದಗಿಸಲು ಕಾರ್ಯಾಗಾರ ಆಯೋಜಿಸುವ ಗುರಿ ಹೊಂದಲಾಗಿದೆ ಎಂದು ಎಫ್ಕೆಸಿಸಿಐ ನೂತನ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಾಗಾರದಿಂದ ಒಂದು ಲಕ್ಷ ಜನರಿಗೆ ತರಬೇತಿ ನೀಡುವ ಉದ್ದೇಶವಿದೆ. ರಾಜ್ಯದಲ್ಲಿ ಹೂಡಿಕೆ ಮಾಡಲು ಎನ್ಆರ್ಐಗಳನ್ನು ಆಕರ್ಷಿಸುವ ಜತೆಗೆ ಯುವಕರಿಗೆ ಉದ್ಯೋಗ ಒದಗಿಸುವಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದರು.
ಈಗಾಗಲೇ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದ್ದು, ಎಫ್ಕೆಸಿಸಿಐನಲ್ಲಿರುವ ಎನ್ಆರ್ಐ ಫೆÇೀರಂಗೆ 50 ಜನ ಅನಿವಾಸಿ ಭಾರತೀಯರನ್ನು ಸದಸ್ಯರನ್ನಾಗಿಸಿ ರಾಜ್ಯದಲ್ಲಿ ಹೂಡಿಕೆ ಮಾಡಲು ಆಹ್ವಾನ ನೀಡಲಾಗುತ್ತಿದೆ. ಈ ಬಗ್ಗೆ ಸರ್ಕಾರದೊಂದಿಗೂ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.
ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಪಡಿಸುವ ಕೆಲಸವಾಗಬೇಕು. ಭೋಗ್ಯ ಮತ್ತು ಮಾರಾಟದ ಅವಧಿಯನ್ನು 99 ವರ್ಷದ ಬದಲಿಗೆ 10 ವರ್ಷಗಳಿಗೆ ನಿಗದಿಯಾಗಬೇಕು. ಒಮ್ಮೆ ಕೈಗಾರಿಕಾ ಪ್ರದೇಶವೆಂದು ಗುರುತಿಸಿದ ಮೇಲೆ ಅದನ್ನು ಬದಲಾಯಿಸದಂತೆ ನಿಯಮ ರೂಪಿಸಬೇಕೆಂದು ಒತ್ತಾಯಿಸಿದರು.