ಬೆಂಗಳೂರು, ಆ.4-ಸ್ವಾತಂತ್ರ್ಯೋತ್ಸವ ಪ್ರಯುಕ್ತ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಅದ್ಧೂರಿ ಚಾಲನೆ ದೊರೆತಿದ್ದು, ಜನಸಾಗರವೇ ಹರಿದು ಬಂದಿದೆ.
ಬೆಳಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ, ಫಲಪುಷ್ಪ ಪ್ರದರ್ಶನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಶಾಸಕ ಉದಯ ಗರುಡಾಚಾರ್, ಹಿರಿಯ ಅಧಿಕಾರಿ ಮಹೇಶ್ವರರಾವ್, ತೋಟಗಾರಿಕೆ ಇಲಾಖೆ ನಿರ್ದೇಶಕ ವೈ.ಎಸ್.ಪಾಟೀಲ್ ಹಾಜರಿದ್ದರು.
ಚಾಲನೆ ನೀಡಿದ ನಂತರ ಮುಖ್ಯಮಂತ್ರಿಗಳು ಅಮರ್ ಜವಾನ್ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ದೇಶ ರಕ್ಷಣೆ ಮಾಡುವಂತಹ ಸೈನಿಕರು ಮತ್ತು ರಕ್ಷಣಾ ಪಡೆಗೆ ನಮನ ಸಲ್ಲಿಸುವ ಉದ್ದೇಶದಿಂದ ಈ ಬಾರಿ ಸಿಯಾಚಿನ್ ಪ್ರತಿಕೃತಿಯನ್ನು ಅದ್ಭುತವಾಗಿ ನಿರ್ಮಿಸಲಾಗಿದೆ. ಇದು ನಿಜಕ್ಕೂ ಸಂತಸದ ವಿಷಯ ಎಂದು ಕುಮಾರಸ್ವಾಮಿ ಈ ವೇಳೆ ಹೇಳಿದರು.
ಹೂವಿನಿಂದ ಸಿದ್ಧಗೊಂಡಿರುವ ಎಚ್‍ಎಎಲ್ ಸೇನೆಗೆ ಕೊಟ್ಟಿರುವ ವಿಮಾನಗಳು ಯುದ್ಧದ ಸಂದರ್ಭದಲ್ಲಿ ಬಳಸುವ ವಾಹನಗಳನ್ನು ಇಡಲಾಗಿದೆ. ಅಲ್ಲದೆ ಸೈನಿಕರು ಬಳಸುವಂತಹ ಎಕೆ-47, ಲಾಂಚರ್, ಸೆಮಿ ಆಟೋಮ್ಯಾಟಿಕ್ ಗನ್‍ಗಳು, ಜೀವಂತ ಗುಂಡುಗಳು ಪ್ರದರ್ಶನಕ್ಕೆ ಇಟ್ಟು ಅವುಗಳ ಬಗ್ಗೆ ಯೋಧರೇ ಖುದ್ದು ಮಾಹಿತಿ ನೀಡುತ್ತಿರುವುದು ಮೆಚ್ಚುವ ಕೆಲಸ ಎಂದು ಶ್ಲಾಘಿಸಿದರು.
ಈ ಬಾರಿ ವಿಶೇಷವಾಗಿ ಹೂವಿನಿಂದ ವಿವಿಧ ಪ್ರತಿಕೃತಿಗಳನ್ನು ನಿರ್ಮಿಸಿದ್ದು, ಆಹ್ಲಾದಕರವಾಗಿದೆ. ಜೊತೆಗೆ ಸೇನೆ ಬಗ್ಗೆ ಸಾಕಷ್ಟು ಮಾಹಿತಿ ತಿಳಿಸುವ ಕೆಲಸ ಮಾಡಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಿಎಂ ಮನವಿ ಮಾಡಿದರು.
ಮೈಸೂರು ಉದ್ಯಾನವನದ ಕಲಾಸಂಘದ ಆಶ್ರಯದಲ್ಲಿ ಇಂದಿನಿಂದ ಆ.15ರವರೆಗೂ ಫಲಪುಷ್ಪ ಪ್ರದರ್ಶನ ಇರಲಿದೆ. ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಹೂಗಳನ್ನು ಶೃಂಗರಿಸಲಾಗಿದೆ.
ಸಿಯಾಚಿನ್ ಮಾದರಿಯ ಪ್ರತಿಕೃತಿ ನಿಜಕ್ಕೂ ಅದ್ಭುತವಾಗಿದೆ. ಇದರ ಅಕ್ಕಪಕ್ಕ ಬಂಕ್‍ಗಳನ್ನು ಇಡಲಾಗಿದೆ. ಇದು ನಮ್ಮ ದೇಶದ ಅತೀ ಎತ್ತರದ ಪ್ರದೇಶವಾಗಿದ್ದು, 30 ಡಿಗ್ರಿ ಸೆಲ್ಷಿಯಸ್ ಹಿಮದಿಂದ ತುಂಬಿರುತ್ತದೆ. ಇಲ್ಲಿ ಯುದ್ಧ ಮಾಡಿ ಬದುಕುವುದೇ ದುಸ್ತರ. ಅಂತಹುದರಲ್ಲಿ ನಮ್ಮ ಯೋಧರು ಅಪಾಯಕರ ಸ್ಥಿತಿಯಲ್ಲಿ ಯುದ್ಧ ಮಾಡುತ್ತಾರೆ.
ಉಪಗ್ರಹ ಉಡಾವಣೆ ಪಿಎಸ್‍ಎಲ್‍ವಿ, ಜಿಎಸ್‍ಎಲ್‍ವಿಗಳನ್ನು ಹೂಗಳಿಂದ ರಚಿಸಲಾಗಿದೆ. ಕನ್ನಡ ಚಿತ್ರರಂಗದ 85ರ ಸವಿ ನೆನಪನ್ನು 15 ಸಾವಿರ ಗುಲಾಬಿ ಹೂಗಳನ್ನು ಬಳಸಿ ಸಿದ್ಧಪಡಿಸಲಾಗಿದೆ.
ಯುವಜನರು ಸಿಯಾಚಿನ್ ಪ್ರತಿಕೃತಿ ಹಾಗೂ ಯುದ್ಧದಲ್ಲಿ ಬಳಸುವ ಶಸ್ತ್ರಾಸ್ತ್ರಗಳ ಬಳಿ ನಿಂತು ಸೆಲ್ಫೀ ತೆಗೆಸಿಕೊಂಡು ಸಂತಸಪಡುತ್ತಿದ್ದುದು ಕಂಡುಬಂತು.
ಸಾಮಾನ್ಯವಾಗಿ ವಸ್ತುಪ್ರದರ್ಶನ ಉದ್ಘಾಟನೆ ದಿನ ಅತಿ ಹೆಚ್ಚು ಜನ ಬರುವುದಿಲ್ಲ. ಆದರೆ ಈ ಬಾರಿ ಜನಸಾಗರವೇ ಹರಿದುಬಂದಿದೆ. ಮಳಿಗೆಗಳು, ಗಾಜಿನ ಮನೆ ಎಲ್ಲಿ ನೋಡಿದರೂ ಜನಜಂಗುಳಿ ಸೇರಿದ್ದರು.