ಬೆಂಗಳೂರು, ಆ.4-ರಾಜ್ಯ ರಾಜಕಾರಣ ನಿಂತ ನೀರಲ್ಲ. ಯಾವುದೇ ಕ್ಷಣದಲ್ಲಾದರೂ ಸರ್ಕಾರ ಬೀಳಬಹುದು. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಬಹುದು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಸಾಕಷ್ಟು ಮಳೆಯಾಗಿ ಜಲಾಶಯಗಳು ಭರ್ತಿಯಾದಾಗ ಕ್ರಸ್ಟ್‍ಗೇಟ್‍ಗಳನ್ನು ತೆಗೆದು ನೀರು ಹೊರಬಿಡುವಂತೆ ಯಾವುದೇ ಕ್ಷಣದಲ್ಲಿ ಬೇಕಾದರೂ ಸರ್ಕಾರ ಬೀಳಬಹುದು. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಶೇ.70ರಷ್ಟು ಸ್ಥಾನಗಳನ್ನು ಗಳಿಸುವ ವಿಶ್ವಾಸವಿದೆ. ಈ ಚುನಾವಣೆಯಲ್ಲಿ ಜನ ಅವರಿಗೆ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.
ಮಾಧ್ಯಮಗಳ ಹಾರಿಕೆ ಸುದ್ದಿಗಳಿಗೆ ಕಿವಿಗೊಡಬೇಡಿ. ಅವರು ಸುದ್ದಿಗೆ ಮಸಾಲೆ ಬೆರೆಸುತ್ತಾರೆ, ಆದರೆ ನಮ್ಮ ಕಾರ್ಯಕರ್ತರೇ ನಮಗೆ ಮೀಡಿಯಾಗಳು. ಅವರ ಮೇಲೆ ನಮಗೆ ನಂಬಿಕೆ ಇದೆ ಎಂದು ನುಡಿದರು.
ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಹಾಗೂ ಹಗರಣಗಳು ಈಗಲೂ ಮುಂದುವರೆದಿದೆ. ಮೊದಲು ಅವರೊಬ್ಬರೇ ಲೂಟಿ ಮಾಡುತ್ತಿದ್ದರು. ಈಗ ಅವರಿಬ್ಬರೂ ಸೇರಿ ಲೂಟಿ ಮಾಡುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಇಬ್ಬರು ಕ್ಯಾಪ್ಟನ್‍ಗಳಾಗಿದ್ದಾರೆ ಎಂದು ಹರಿಹಾಯ್ದರು.
ನೆರೆಯ ದೇಶಗಳಿಂದ ಬರುವ ವಲಸಿಗರನ್ನು ಇರಿಸಿಕೊಳ್ಳಬಾರದೆಂಬ ಆದೇಶ ಸುಪ್ರೀಂಕೋರ್ಟ್ ನೀಡಿದೆ. ಬೆಂಗಳೂರಿನಲ್ಲೂ ಸುಮಾರು ಒಂದೂವರೆ ಲಕ್ಷದಷ್ಟು ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆ. ಚಿಕ್ಕಮಗಳೂರಿನ ಕಾಫಿ ತೋಟಗಳಲ್ಲೂ ಮೂರ್ನಾಲ್ಕು ಲಕ್ಷ ಮಂದಿ ಅಕ್ರಮ ವಲಸಿಗರು ನೆಲೆಸಿದ್ದಾರೆ ಎಂಬ ಮಾಹಿತಿ ಇದೆ. ಯಾವುದೇ ಕಾರಣಕ್ಕೂ ದೇಶದ್ರೋಹಿಗಳನ್ನು ಬಿಡುವುದಿಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರ ದಿಕ್ಕು-ದೆಸೆ ಇಲ್ಲ. ಘೋಷಣೆ ಮಾಡಿದ ಯೋಜನೆಗಳು ಜಾರಿಯಾಗುವ ಲಕ್ಷಣಗಳೇ ಕಾಣುತ್ತಿಲ್ಲ.ಈ ಸರ್ಕಾರದ ಮೇಲೆ ಅಧಿಕಾರಿಗಳು ಹಾಗೂ ಜನಸಾಮಾನ್ಯರ ಮೇಲೆ ನಂಬಿಕೆ ಇಲ್ಲ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಹೇಳಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯ ಪ್ರವಾಸವನ್ನೇ ಮಾಡುತ್ತಿಲ್ಲ. ಇಲ್ಲೇ ಮಗನ ಸಿನಿಮಾ ಟೀಸರ್ ಬಿಡುಗಡೆ ಮಾಡಿಕೊಂಡು ರಾಮನಗರ ಕಡೆ ಮಾತ್ರ ಹೋಗಿ-ಬರುತ್ತಿದ್ದಾರೆ. ರಾಜ್ಯದಲ್ಲಿ ಒಂದು ರೀತಿಯ ವಿಚಿತ್ರ ಪರಿಸ್ಥಿತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಬೆಂಗಳೂರಿಗೆ ಎಲಿವೇಟೆಡ್ ಕಾರಿಡಾರ್ ಯೋಜನೆ ಘೋಷಣೆ ಮಾಡಿದ್ದರೂ 16 ಸಾವಿರ ಕೋಟಿಯ ಈ ಯೋಜನೆಗೆ ಬಜೆಟ್‍ನಲ್ಲಿ ಕೇವಲ 1 ಸಾವಿರ ಕೋಟಿ ಇಟ್ಟಿದ್ದಾರೆ. ಕಸದ ಮಾಫಿಯಾ ಮಿತಿ ಮೀರಿದೆ. ಬೀದಿ ಬೀದಿಗಳಲ್ಲಿ ಡ್ರಗ್ಸ್ ಮಾರಾಟವಾಗುತ್ತಿದೆ. ಈ ಸಂಬಂಧ ನಾವು ಸೋಮವಾರ ಪೆÇಲೀಸ್ ಕಮೀಷನರ್ ಅವರನ್ನು ಭೇಟಿಯಾಗಿ ಡ್ರಗ್ ಮಾಫಿಯಾ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತೇವೆ. ಸರ್ಕಾರ ದಿವಾಳಿಯಾಗಿದೆ. ಬೆಂಗಳೂರಿಗೆ ಕೊಟ್ಟಿರುವ ಅನುದಾನವನ್ನೆಲ್ಲ ವಾಪಸ್ ಪಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.