ಬೆಂಗಳೂರು,ಆ.4- ಅನೇಕ ಮಹನೀಯರ ತ್ಯಾಗ, ನಿಸ್ವಾರ್ಥದಿಂದ ಏಕೀಕರಣಗೊಂಡಿರುವ ಕರ್ನಾಟಕವನ್ನು ಅವಿವೇಕದಿಂದಲೋ, ಸ್ವಾರ್ಥದಿಂದಲೋ ಕೆಲವರು ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಆರೋಪಿಸಿದೆ.
ಯಾವುದೇ ಕಾರಣಕ್ಕೂ ಕರ್ನಾಟಕ ಒಡೆಯದೆ ಅಖಂಡವಾಗಿರಬೇಕು. ಇನ್ನು ಮುಂದಾದರೂ ರಾಜಕೀಯ ನಾಯಕರು ಸೇರಿದಂತೆ ಎಲ್ಲರೂ ಜನರ ಮನಸನ್ನು ಅರ್ಥ ಮಾಡಿಕೊಂಡು ಜನವಿರೋಧಿ ಕಾಯಕ್ಕೆ ಕೈ ಹಾಕದೆ ನಾಡಿನ ಏಳಿಗೆಗೆ ಮುಂದಾಗಬೇಕು ಎಂದು ಮಹಾಸಭೆ ಹಿರಿಯ ಉಪಾಧ್ಯಕ್ಷ ಎನ್.ತಿಪ್ಪಣ್ಣ ಹೇಳಿದ್ದಾರೆ.
ಕರ್ನಾಟಕದ ಪ್ರತ್ಯೇಕತೆ ಕೂಗಿನ ಹಿನ್ನೆಲೆಯಲ್ಲಿ ನಡೆದ ಬಂದ್ ಆಚರಣೆ ಸಂಪೂರ್ಣ ವಿಫಲವಾಗಿರುವುದು ರಾಜ್ಯದ ವಿಭಜನೆಗೆ ಜನರ ವಿರೋಧವಿದೆ ಎಂಬುದನ್ನು ಎತ್ತಿ ತೋರಿಸಿದೆ. ಇದನ್ನು ನಮ್ಮ ಮಹಾಸಭೆಯೂ ಸ್ವಾಗತಿಸುತ್ತದೆ ಎಂದಿದ್ದಾರೆ.
ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಅನ್ಯಾಯವಾಗಿರುವುದು ಸತ್ಯ. ಹಾಗಾಗಿ ರಾಜ್ಯ ವಿಭಜನೆಗೆ ಬದಲು ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಆಗ್ರಹಿಸಿದರು.