ಜಮ್ಮು: ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ನಿವಾಸಕ್ಕೆ ಆಗಂತುಕನೊಬ್ಬ ನುಗ್ಗಲು ಯತ್ನಿಸಿದ್ದು , ಆತನನ್ನು ಭದ್ರತಾ ಸಿಬಂದಿ ಗುಂಡಿಕ್ಕಿ ಹತ್ಯೆಗೈದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಮುಖ್ಯ ಗೇಟ್ ಉಲ್ಲಂಘನೆ ಮಾಡಿ ಒಳ ನುಗ್ಗಿದ ಆಗಂತುಕ ಭದ್ರತಾ ಸಿಬಂದಿಯೊಂದಿಗೆ ಹೊಡೆದಾಟಕ್ಕಿಳಿದಿದ್ದಾನೆ.ಕೂಡಲೇ ಆತನ ಮೇಲೆ ಗುಂಡು ಹಾರಿಸಲಾಯಿತು ಎಂದು ಎಸ್ಎಸ್ಪಿ ವಿವೇಕ್ ಗುಪ್ತಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಇದು ಉಗ್ರ ದಾಳಿ ಎಂದು ಕಾಣುವುದಿಲ್ಲ ಎಂದು ಗುಪ್ತಾ ಹೇಳಿದ್ದಾರೆ.
ದಾಳಿ ವೇಳೆ ರಕ್ಷಣಾ ಸಿಬಂದಿಯೊಬ್ಬರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಪಡೆಗಳು ಆಗಮಿಸಿದ್ದು,ತನಿಖೆ ನಡೆಸುತ್ತಿದ್ದಾರೆ.
ಹತ್ಯೆಗೀಡಾದ ವ್ಯಕ್ತಿ ಪೂಂಚ್ನ ನಿವಾಸಿ ಮುರ್ಫಾಸ್ ಶಾ ಎನ್ನುವವನಾಗಿದ್ದು, ಈತ ಎಸ್ಯುವಿ ಕಾರಿನಲ್ಲಿ ಮುಖ್ಯ ವಿಐಪಿ ಗೇಟ್ ದಾಟಿ ಮನೆಯ ಬಾಗಿಲಿಗೆ ತೆರಳಿದ್ದ ಎಂದು ತಿಳಿದು ಬಂದಿದೆ.
ಕೊಂದಿದ್ದೇಕೆ ?
ಈ ಬಗ್ಗೆ ಹತ್ಯೆಗೀಡಾದ ಮುರ್ಫಾಸ್ ತಂದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ನನ್ನ ಮಗನನ್ನು ಬಂಧಿಸಬಹುದಿತ್ತಲ್ಲ. ಗುಂಡಿಕ್ಕಿ ಹತ್ಯೆಗೈದಿದ್ದೇಕೆ ? ಭದ್ರತಾ ಸಿಬಂದಿ ಗೇಟ್ನಲ್ಲಿ ಇದ್ದಿದ್ದರೆ ನನ್ನ ಮಗ ಒಳಗೆ ಹೇಗೆ ಹೋಗುತ್ತಿದ್ದ. ಭದ್ರತಾ ಲೋಪ ಎದ್ದು ಕಾಣುತ್ತಿದೆ . ಪ್ರತೀ ನಿತ್ಯವೂ ಆತ ಜಿಮ್ಗೆ ತೆರಳುತ್ತಿದ್ದ. ಇಂದೂ ತೆರಳಿದ್ದ. ಆತನನ್ನು ಕೊಲೆಗೈದಿದ್ದೇಕೆ ಎಂದು ನೋವು ತೋಡಿಕೊಂಡಿದ್ದಾರೆ.