ಬೆಂಗಳೂರು, ಆ.3-ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾಯದೆ ಸಚಿವ ಸಂಪುಟ ವಿಸ್ತರಣೆ ಮಾಡಬೇಕೆಂದು ರಾಜ್ಯ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮೇಲೆ ಒತ್ತಡ ತಂದಿದ್ದಾರೆ.
ಆಷಾಢ ಮುಗಿದ ನಂತರ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕ ಮಾಡುವುದಾಗಿ ಸಮನ್ವಯ ಸಮಿತಿ ಅಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ ಪ್ರಸ್ತುತ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆಯಾಗಿದ್ದು, ಚುನಾವಣೆ ನೆಪದಲ್ಲಿ ಸಂಪುಟ ವಿಸ್ತರಣೆಯನ್ನು ಮುಂದೂಡುವ ಪ್ರಯತ್ನವನ್ನು ಮಾಡಬಾರದೆಂದು ರಾಜ್ಯ ಕಾಂಗ್ರೆಸ್ ನಾಯಕರು ಪಕ್ಷದ ಉಸ್ತುವಾರಿ ವೇಣುಗೋಪಾಲ್ ಮೂಲಕ ಹೈಕಮಾಂಡ್ಗೆ ಸಂದೇಶ ರವಾನಿಸಿದ್ದಾರೆ.
ಈಗಾಗಲೇ ಕೆಲವು ಬೆಳವಣಿಗೆಗಳಿಂದ ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ಸಚಿವ ಸಂಪುಟದಲ್ಲಿ ಅನ್ಯಾಯವಾಗಿದೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹಲವು ಶಾಸಕರು ಪರ್ಯಾಯ ಚಿಂತನೆ ನಡೆಸುವ ಹಾದಿಯಲ್ಲಿದ್ದಾರೆ. ಪ್ರಸ್ತುತ ಸ್ಥಳೀಯ ಸಂಸ್ಥೆಗಳ ಚುನಾವಣಾ ಸಂದರ್ಭದಲ್ಲಿ ಅಧಿಕಾರ ಹಂಚಿಕೆ ಮಾಡದಿದ್ದರೆ ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ. ಹಾಗಾಗಿ ಆಷಾಢ ಮುಗಿದ ಕೂಡಲೇ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕವನ್ನು ಮಾಡಬೇಕು, ಯಾವುದೇ ಕಾರಣಕ್ಕೂ ಮುಂದೂಡುವ ಪ್ರಯತ್ನ ಮಾಡಬಾರದೆಂಬ ಒತ್ತಡವನ್ನು ಹೇರಿದ್ದಾರೆ ಎನ್ನಲಾಗಿದೆ.
ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದವರಿಗೆ ಇನ್ನೂ 6 ಸಚಿವ ಸ್ಥಾನಗಳು ಲಭ್ಯವಾಗಲಿದ್ದು, ಅದರಲ್ಲಿ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಲು ತೀರ್ಮಾನಿಸಲಾಗಿತ್ತು.
ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಾಕಷ್ಟು ಅಸಮಾಧಾನ, ಭಿನ್ನಮತ ಭುಗಿಲೆದ್ದಿತ್ತು. ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಅಸಮಾಧಾನಗೊಂಡವರಿಗೆ ಅವಕಾಶ ನೀಡಲಾಗುವುದು ಎಂದು ಹೈಕಮಾಂಡ್ ನಾಯಕರು ಸಮಾಧಾನ ಪಡಿಸಿದ್ದರು.
ಉತ್ತರ ಕರ್ನಾಟಕದವರಿಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಆ ಭಾಗದ ಜನರ ಒಲವು ಗಳಿಸಲು ಕಾಂಗ್ರೆಸ್ ಮುಂದಾಗಿದ್ದು, ಸಂಪುಟ ವಿಸ್ತರಣೆ ಸಂದರ್ಭದಲ್ಲಿ 4 ಸಚಿವ ಸ್ಥಾನಗಳನ್ನೂ ಉತ್ತರ ಕರ್ನಾಟಕದವರಿಗೇ ನೀಡಲು ಚರ್ಚೆ ನಡೆದಿದೆ.
ಈ ರೀತಿಯಾದರೆ ಎಂ.ಬಿ.ಪಾಟೀಲ್, ಬಿ.ಸಿ.ಪಾಟೀಲ್, ಸಿ.ಎಸ್.ಶಿವಳ್ಳಿ, ತುಕಾರಾಮ್ ಅವರಿಗೆ ಸಚಿವ ಸ್ಥಾನ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ. ಇನ್ನು 30 ನಿಗಮ ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರನ್ನು ನೇಮಕ ಮಾಡಲು ಮೈತ್ರಿ ಸರ್ಕಾರ ಉದ್ದೇಶಿಸಿದ್ದು, 20 ಕಾಂಗ್ರೆಸ್, 10 ಜೆಡಿಎಸ್ ಪಕ್ಷದವರಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಈ ನಿಗಮ ಮಂಡಳಿಗಳಿಗೆ ಆಷಾಢ ಕಳೆದ ಕೂಡಲೇ ನೇಮಕ ಮಾಡಬೇಕೆಂಬ ಆಗ್ರಹವೂ ಕೂಡ ಕೇಳಿ ಬಂದಿದೆ.
ಹುದ್ದೆಗಳನ್ನು ಪಡೆಯಲು ಆಕಾಂಕ್ಷಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಚುನಾವಣೆಗೆ ಮುನ್ನ ಹುದ್ದೆ ನೀಡಿದರೆ ಹೆಚ್ಚು ಉತ್ಸುಕರಾಗಿ ಕೆಲಸ ಮಾಡುತ್ತಾರೆ. ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕಕ್ಕೆ ಕೈ ಹಾಕಿದರೆ ಮತ್ತೊಂದು ಹಂತದ ಭಿನ್ನಮತ, ಅಸಮಾಧಾನ ತಲೆದೋರಿ ಚುನಾವಣಾ ಸಂದರ್ಭದಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದರೂ ಆಶ್ಚರ್ಯವಿಲ್ಲ. ಹಾಗಾಗಿ ಕಾಂಗ್ರೆಸ್ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಿದೆ.