ಬೆಂಗಳೂರು, ಆ.3-ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಯಾಣ ನಿಷೇಧ ತೆಗೆಯಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ನಾಳೆ (ಆ.4) ಬೆಳಗ್ಗೆ 11.30ಕ್ಕೆ ಮಲ್ಲೇಶ್ವರದ 18ನೇ ಕ್ರಾಸ್ನ ಅರಣ್ಯ ಇಲಾಖೆ ಕಾರ್ಯಾಲಯದ ಮುಂಭಾಗ ತಮಟೆ ಚಳವಳಿ ಹಮ್ಮಿಕೊಂಡಿರುವುದಾಗಿ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಾಟಾಳ್, ಬಂಡೀಪುರ ರಾಷ್ಟ್ರೀಯ ಉದ್ಯಾನವನದ ರಸ್ತೆಯಲ್ಲಿ ಕೇಂದ್ರದ ಕೆಲವು ವನ್ಯಜೀವಿ ಪರಿಣಿತರು ಮೇಲ್ಸೇತುವೆ ಮಾಡುವ ಮೂಲಕ ಪ್ರಯಾಣ ನಿಷೇಧ ತೆರವು ಮಾಡಬಹುದೆಂದು ಸಲಹೆ ನೀಡಿದ್ದಾರೆ. ಇದು ಅತ್ಯಂತ ಅಪಾಯಕಾರಿ ಸಲಹೆಯಾಗಿದೆ. ಒಂದು ವೇಳೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಪ್ರಾಣಿಗಳಿಗೆ ಹೆಚ್ಚಿನ ಹಾನಿಯಾಗುತ್ತದೆ. ಮೇಲ್ಸೇತುವೆಯಲ್ಲಿ ಹೋಗುವ ವಾಹನಗಳ ಬೆಳಕು ಈ ಅರಣ್ಯದ ಮೇಲೆ ಬಿದ್ದು, ಪ್ರಾಣಿಗಳಿಗೆ ದೊಡ್ಡ ಹಿಂಸೆಯಾಗುತ್ತದೆ ಎಂದು ಹೇಳಿದರು.
ಬಂಡೀಪುರ ರಾಷ್ಟ್ರೀಯ ಉದ್ಯಾನವನ ನಮ್ಮ ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿದ ವನವಾಗಿದೆ. ಆನೆ,ಚಿರತೆ ಮತ್ತಿತರ ಪ್ರಾಣಿಗಳು ಅಮೂಲ್ಯ ಮರಗಿಡಗಳು, ವಿವಿಧ ತಳಿಯ ಪಕ್ಷಿಗಳ ಪ್ರಭೇದಗಳು ಬಂಡೀಪುರ ಅರಣ್ಯದಲ್ಲಿದೆ. ಇದು ರಾಜ್ಯದ ಹುಲಿ ಸಂರಕ್ಷಿತ ಪ್ರದೇಶವಾಗಿದೆ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರ ಯಾವುದೇ ಕಾರಣಕ್ಕೂ ಕೇಂದ್ರದ ಒತ್ತಡಕ್ಕೆ ಮಣಿಯಬಾರದು, ನಿಷೇಧವನ್ನು ರದ್ದು ಮಾಡಬಾರದು ಎಂದು ಆಗ್ರಹಿಸಿದರು.