ರಾಜ್ಯ ವಿಧಾನ ಮಂಡಲದ ಜಂಟಿ ಸಮಿತಿಗಳಿಗೆ ಸದಸ್ಯರ ನೇಮಕ

 

ಬೆಂಗಳೂರು,ಆ.3- ಪ್ರಸಕ್ತ ಸಾಲಿನ ರಾಜ್ಯ ವಿಧಾನ ಮಂಡಲದ ಜಂಟಿ ಸಮಿತಿಗಳಿಗೆ ಸದಸ್ಯರನ್ನು ಹಾಗೂ ವಿಧಾನಪರಿಷತ್‍ನ ವಿವಿಧ ಸಮಿತಿಗಳಿಗೆ ಸದಸ್ಯರು, ಅಧ್ಯಕ್ಷರನ್ನು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನಾಮನಿರ್ದೇಶನ ಮಾಡಿದ್ದಾರೆ.
ಉಭಯ ಸದನಗಳ ಜಂಟಿ ಸಮಿತಿಗಳಾದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ,ಅಧೀನ ಶಾಸನ ರಚನಾ ಸಮಿತಿ, ಸಾರ್ವಜನಿಕ ಉದ್ಯಮಗಳ ಸಮಿತಿ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಕಲ್ಯಾಣ ಸಮಿತಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ, ಸಭೆಯ ಮುಂದಿಡಲಾಗುವ ಕಾಗದ ಪತ್ರಗಳ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಗಳ ಸಮಿತಿ, ಗ್ರಂಥಾಲಯ ಸಮಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಗೆ ವಿಧಾನಪರಿಷತ್‍ನ ಐದು ಮಂದಿ ಸದಸ್ಯರನ್ನು ನಾಮನಿರ್ದೇಶನ ಮಾಡಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ವಿಧಾನಪರಿಷತ್‍ನ ಹಕ್ಕು ಬಾಧ್ಯತಾ ಸಮಿತಿಗೆ ಆಯನೂರು ಮಂಜುನಾಥ್ ಅಧ್ಯಕ್ಷತೆಯಲ್ಲಿ ಏಳು ಮಂದಿ ಸದಸ್ಯರನ್ನು ನೇಮಕ ಮಾಡಲಾಗಿದೆ. ಸರ್ಕಾರಿ ಭರವಸೆಗಳ ಸಮಿತಿಗೆ ಕೆ.ಸಿ.ಕೊಂಡಯ್ಯ ಅಧ್ಯಕ್ಷತೆಯಲ್ಲಿ ಒಂಭತ್ತು ಸದಸ್ಯರನ್ನು ನೇಮಕ ಮಾಡಿದ್ದು, ಅರ್ಜಿಗಳ ಸಮಿತಿಗೆ ಕೆ.ಪ್ರತಾಪ್ ಚಂದ್ರ ಶೆಟ್ಟಿ ಅಧ್ಯಕ್ಷತೆಯಲ್ಲಿ ಎಂಟು ಮಂದಿ ಸದಸ್ಯರನ್ನು ನೇಮಕ ಮಾಡಲಾಗಿದೆ.
ವಸತಿ ಸಮಿತಿಗೆ ರಘುನಾಥ್ ರಾವ್ ಮಲ್ಕಾಪುರೆ ಅಧ್ಯಕ್ಷತೆಯಲ್ಲಿ ಐದು ಮಂದಿ ಸದಸ್ಯರು, ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಗೆ ವಿ.ಎಸ್.ಉಗ್ರಪ್ಪ ಅಧ್ಯಕ್ಷತೆಯಲ್ಲಿ 07 ಮಂದಿ ಸದಸ್ಯರನ್ನು ಸಭಾಪತಿ ನೇಮಕ ಮಾಡಿದ್ದಾರೆ.
ಸಭಾಪತಿ ಅವರ ಅಧ್ಯಕ್ಷತೆಯಲ್ಲಿರುವ ನೀತಿ ನಿರೂಪಣಾ ಸಮಿತಿಗೆ ಐದು ಮಂದಿ ಸದಸ್ಯರನ್ನು ನೇಮಕ ಮಾಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ