ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಜೆಡಿಎಸ್ ಮಹತ್ವದ ಸಭೆ

 

ಬೆಂಗಳೂರು,ಆ.3- ನಗರ ಸ್ಥಳೀಯ ಸಂಸ್ಥೆಗಳ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಚುನಾವಣೆ ಪೂರ್ವ ಸಿದ್ಧತೆಗೆ ಸಂಬಂಧಿಸಿದಂತೆ ಜೆಡಿಎಸ್‍ನ ಮಹತ್ವದ ಸಭೆ ಭಾನುವಾರ ನಡೆಯಲಿದೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪಕ್ಷದ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ. ಪಕ್ಷದ ಶಾಸಕರು, ವಿಧಾನಪರಿಷತ್ ಸದಸ್ಯರು, ಪ್ರಮುಖ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಚುನಾವಣೆ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.
ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿರುವ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಬೇಕೆ ಅಥವಾ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸಬೇಕೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಚುನಾವಣೆ ಘೋಷಣೆಯಾಗಿದ್ದು, ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಗೌಡರು ಪಕ್ಷದ ಮುಖಂಡರಿಗೆ ಮಾರ್ಗದರ್ಶನ ಮಾಡಲಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಗೆ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಪಕ್ಷದ ಬಲ ವೃದ್ದಿಸಲು ಹಾಗೂ ಸಾಮಥ್ರ್ಯ ಅರಿಯಲು ಸಹಕಾರಿಯಾಗಿದೆ ಎಂದು ಭಾವಿಸಲಾಗಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದು, ಅದರ ಬಗ್ಗೆ ಹೆಚ್ಚಿನ ಪ್ರಚಾರ ನೀಡಿ ಜನರಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿಯನ್ನು ಎಲ್ಲ ಶಾಸಕರಿಗೂ ಹಾಗೂ ಮುಖಂಡರಿಗೂ ನೀಡುವ ಸಾಧ್ಯತೆಗಳಿವೆ.
ಉತ್ತರ ಕರ್ನಾಟಕದ ಪ್ರತ್ಯೇಕತೆಯ ಕೂಗಿನ ಹಿನ್ನೆಲೆಯಲ್ಲಿ ಪಕ್ಷಕ್ಕೆ ಯಾವುದೇ ರೀತಿ ಧಕ್ಕೆಯಾಗದಂತೆ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಅಲ್ಲದೆ ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮಾಡರುವ ಕಾರ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂಬ ಬಗ್ಗೆ ಗೌಡರು ನಿರ್ದೇಶನ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಎರಡು ತಿಂಗಳಿನಿಂದ ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿರುವ ಬಿಜೆಪಿಗೆ ಸಮರ್ಥವಾಗಿ ಉತ್ತರ ನೀಡುವುದು, ಪಕ್ಷಕ್ಕೆ ಮುಜುಗರ ಉಂಟಾಗದಂತೆ ಪಕ್ಷ ಸಂಘಟನೆ ಹಾಗೂ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ಹೆಚ್ಚಿನ ಸ್ಥಾನ ಗೆಲ್ಲಲು ಸ್ಥಳೀಯವಾಗಿ ಕಾರ್ಯತಂತ್ರ ರೂಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ