ಮುಂಬೈ: ಇಲ್ಲಿನ ಸ್ಥಳೀಯ ರೈಲೊಂದರ 2 ನೇ ಕಂಪಾರ್ಟ್ ಮೆಂಟ್ನಲ್ಲಿ ಕೈ ಹಿಡಿದುಕೊಳ್ಳುವ ಹಾಂಗಿಂಗ್ ಸ್ಟಾಂಡ್ ಗೆ ಹಸಿರು ಹಾವೊಂದು ಸುತ್ತಿಕೊಂಡಿದ್ದು, ಪ್ರಯಾಣಿಕರ ಜೊತೆ ರೈಲಿನಲ್ಲಿ ಸಂಚರಿಸಿದೆ.
ಸಾಮಾನ್ಯವಾಗಿ ರೈಲುಗಳಲ್ಲಿ ಪ್ರಯಾಣಿಕರು ಹಾಂಗಿಂಗ್ ಸ್ಟಾಂಡ್ ಅನ್ನು ಹಿಡಿದುಕೊಂಡು ನಿಂತಿರುತ್ತಾರೆ. ಇದೀಗ ಆ ಸ್ಟಾಂಡ್ನಲ್ಲಿ ಹಸಿರು ಹಾವೊಂದು ಸುತ್ತಿಕೊಂಡಿದ್ದು, ಜನರಲ್ಲಿ ಆತಂಕವನ್ನು ಉಂಟುಮಾಡಿದೆ. ಈ ಹಾವು ಬೆಳಗ್ಗೆ 8.33 ಥತ್ವಾಲಾ-ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಎಂಬ ಸ್ಥಳೀಯ ರೈಲಿನಲ್ಲಿ ಇದ್ದು, ರೈಲು ಥಾಣೆಗೆ ತಲುಪುತ್ತಿದ್ದಂತೆ ಕಾಣಿಸಿಕೊಂಡಿದೆ.
ಈ ಅವಘಡದಿಂದ ಜನರೆಲ್ಲರೂ ದಿಗಿಲುಗೊಂಡು ಅಲ್ಲಿಂದ ಓಡಿಹೋಗಲು ಪ್ರಯತ್ನಿಸಿದ್ದಾರೆ. ಅಲ್ಲದೇ ಹಾವನ್ನು ಕಂಡು ಬೆದರಿ ಕಿರುಚಿದ್ದಾರೆ. ಬಳಿಕ ರೈಲ್ವೇ ಪೊಲೀಸರನ್ನು ಕಾಪಾಡುವಂತೆ ಒತ್ತಾಯಿಸಿದರು. ಹಾಗಾಗಿ ರೈಲು ಥಾಣೆಗೆ ಬರುತ್ತಿದ್ದಂತೆ ರೈಲ್ವೇ ಪೊಲೀಸರು 2 ನೇ ಕಂಪಾರ್ಟ್ಮೆಂಟ್ ನಲ್ಲಿದ್ದ ಜನರನ್ನು ಕಾಪಾಡಿದ್ದಾರೆ. ನಂತರ ಭದ್ರತೆ ಮೇರೆಗೆ ಆ ಹಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.
ಮತ್ತೆ ಪ್ರಯಾಣ ಮುಂದುವರಿಸಬೇಕಾದ ಪ್ರಯಾಣಿಕರು ರೈಲನ್ನು ಹತ್ತಿ, ಮತ್ತೆ ಯಾವುದಾದರೂ ಸರಿಸೃಪಗಳು ಇರಬಹುದೆಂದು ಪರೀಕ್ಷಿಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಸ್ಥಳೀಯ ರೈಲು ಸಮಯಕ್ಕೆ ಸರಿಯಾಗಿ ಸ್ಥಳವನ್ನು ಸೇರಲು ವಿಳಂಬವಾಗಿದೆ. ಸದ್ಯ ಈ ಹಸಿರು ಹಾವಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇಂದ್ರ ರೈಲ್ವೇ ಮುಖ್ಯ ಅಧಿಕಾರಿಯಾದ ಸುನೀಲ್ ಉದಾಸಿ, 1ನೇ ಹಾಗೂ 2 ಬಾರಿ ರೈಲು ಪ್ರಯಾಣಿಸಿದಾಗ ಈ ಅವಘಡ ಸಂಭವಿಸಿರಲಿಲ್ಲ. 3 ನೇ ಬಾರಿ ಸಂಭವಿಸಿದ್ದು, ಇದು ಯಾರಾದೋ ಕೈವಾಡವಿರಬಹುದು ಎಂಬ ಅನುಮಾನವಿದೆ. ಹಾವು ಹೇಗೆ ರೈಲನ್ನು ಪ್ರವೇಶಿಸಿತ್ತು ಎಂಬುದನ್ನು ವಿಡಿಯೋ ನೋಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.