ಬೆಂಗಳೂರು: ಜಗತ್ತಿನಾದ್ಯಂತ ಸದ್ಯ ಕಿಕಿ ಡ್ಯಾನ್ಸ್ ಎಂಬ ಅಪಾಯಕಾರಿ ಚಾಲೆಂಜ್ ಒಂದು ಟ್ರೆಂಡ್ ಆಗಿದೆ. ಸದ್ಯ ಎಲ್ಲಿ ನೋಡಿದರು ಕಿಕಿ ಡ್ಯಾನ್ಸ್ ನದ್ದೆ ಹವಾ. ಇಂತಹ ಕಿಕಿ ಡ್ಯಾನ್ಸ್ ಅನ್ನು 80ರ ದಶಕದಲ್ಲೇ ನಟ ಶಂಕರ್ ನಾಗ್ ಕನ್ನಡಕ್ಕೆ ಪರಿಚಯಿಸಿದ್ದರು.
ಹೌದು, ಗೀತಾ ಚಿತ್ರದ ಏನೇ ಕೇಳು ಕೊಡುವೆ ನಿನಗೆ ನಾನೀಗ ಎಂಬ ಹಾಡಿನಲ್ಲಿ ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿದು ಶಂಕರ್ ನಾಗ್ ಕಿಕಿ ಡ್ಯಾನ್ಸ್ ಮಾಡಿದ್ದರು. ನಂತರ ಅಪೂರ್ವ ಸಂಗಮ ಚಿತ್ರದಲ್ಲಿ ಡಾ. ರಾಜ್ ಕುಮಾರ್ ಹಾಗೂ ಶಂಕರ್ ನಾಗ್ ಒಟ್ಟಿಗೆ ಭಾಗ್ಯ ಎನ್ನಲೇ ಪುಣ್ಯ ಎನ್ನಲೇ ಎಂಬ ಹಾಡಿನಲ್ಲಿ ಕಾರಿನಿಂದ ಇಳಿದು ಡ್ಯಾನ್ಸ್ ಮಾಡಿದ್ದರು.
ಈ ವಿಡಿಯೋವನ್ನೇ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಕಿಕಿ ಡ್ಯಾನ್ಸ್ ಅನ್ನು ಕನ್ನಡದವರೇ ಮೊದಲು ಹುಟ್ಟು ಹಾಕಿದ್ದರು. ಅದರಿಂದ ಯಾರಿಗೂ ಸಮಸ್ಯೆ ಆಗಿರಲಿಲ್ಲ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೆನಡಾದ ಹಿಪ್ ಹಾಪ್ ಸ್ಟಾರ್ ಡ್ರೇಕ್ ರ ಹಾಡು ಕಿಕಿ ಡು ಯು ಲವ್ ಮಿ ಇನ್ ಮೇ ಫಿಲಿಂಗ್ ಹಾಡಿಗೆ ಪ್ರೇರಿತಗೊಂಡು ಚಲಿಸುತ್ತಿರುವ ಕಾರಿನೊಂದಿಗೆ ನೃತ್ಯ ಮಾಡುವುದೇ ಈ ಚಾಲೆಂಜ್ ನ ಟಾಸ್ಕ್ ಆಗಿದೆ.
ಸದ್ಯ ಸ್ಯಾಂಡಲ್ವುಡ್ ನಲ್ಲಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಹಾಗೂ ಬಹುಭಾಷಾ ನಟಿ ಪ್ರಣೀತ ಅಪಾಯಕಾರಿ ಕಿಕಿ ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ಚರ್ಚೆಗೆ ಗ್ರಾಸವಾಗಿದೆ.
ಕಿಕಿ ಡ್ಯಾನ್ಸ್ ಚಾಲೆಂಜ್ ಅಪಾಯಕಾರಿಯಾಗಿದ್ದು ಇದನ್ನು ಯಾರು ಮಾಡಬಾರದು ಎಂದು ಕರ್ನಾಟಕ ಪೊಲೀಸರು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.