ಭಾರತೀಯ ಮೂಲದ ಅಕ್ಷಯ್ ವೆಂಕಟೇಶ್ ಗೆ “ಗಣಿತದ ನೋಬೆಲ್” ಫೀಲ್ಡ್ಸ್ ಮೆಡಲ್ ಪ್ರಶಸ್ತಿ

ನ್ಯೂಯಾರ್ಕ್: ಭಾರತ ಮೂಲದ ಆಸ್ಟ್ರೇಲಿಯನ್ ಗಣಿತಶಾಸ್ತ್ರಜ್ಞ ಅಕ್ಷಯ್ ವೆಂಕಟೇಶ್ ಗಣಿತದ ನೋಬೆಲ್ ಎಂದು ಖ್ಯಾತಿ ಪಡೆದಿರುವ ಪ್ರತಿಷ್ಠಿತ ಫೀಲ್ಡ್ಸ್ ಪ್ರಶಸ್ತಿ ಗೆ ಭಾಜನರಾಗಿದ್ದಾರೆ.
ಗಣಿತ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ್ದವರಿಗೆ ನೀಡಲಾಗುವ ಈ ಪ್ರಶಸ್ತಿಗೆ ಅಕ್ಷಯ್ ಸೇರಿ ನಾಲ್ವರನ್ನು ಆಯ್ಕೆ ಮಾಡಲಾಗಿದೆ.
36 ವರ್ಷದ ಅಕ್ಷಯ್ ನವದೆಹಲಿ ಮೂಲದವರು. ಆಸ್ಟ್ರೇಲಿಯಾ ನಿವಾಸಿಯಾಗಿರುವ ಇವರು  ಸ್ಟಾನ್‌ಫ‌ರ್ಡ್‌ ವಿಶ್ವವಿದ್ಯಾಲಯದಲ್ಲಿ ಗಣಿತ ಬೋಧಕರಾಗಿದ್ದಾರೆ  ಎರಡನೇ ವರ್ಷಕ್ಕೆ ಪೋಷಕರೊಡನೆ ಆಸ್ತ್ರೇಲಿಯಾಗೆ ತೆರಳಿದ ಇವರು ಚಿಕ್ಕ ವಯಸ್ಸಿನಿಂದ ಅಗಾಧ ಬುದ್ದಿವಂತಿಕೆ ಹೊಂದಿದ್ದರು. 13ನೇ ವಯಸ್ಸಿನಲ್ಲಿ ವೆಸ್ಟ್ ಆಸ್ಟ್ರೇಲಿಯಾ ವಿಶ್ವವಿದ್ಯಾನಿಲಯದಲ್ಲಿ ಅದ್ಯಯನ ಕೈಗೊಂಡಿದ್ದರು.16ನೇ ವಯಸ್ಸಿಗೆ ಗಣಿತದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ನಂತರ ಪ್ರಿನ್ಸನ್​ ಯೂನಿವರ್ಸಿಟಿ ಸೇರಿದ್ದರು.
ಸಂಖ್ಯಾ ಸಿದ್ಧಾಂತ, ಅಂಕಗಣಿತ, ರೇಖಾಗಣಿತ, ಟೋಪೋಲೊಜಿ, ಆಟೋಮಾರ್ಫಿಕ್ ರೂಪಗಳು ಮತ್ತು ಎರ್ಗೊಡಿಕ್ ಸಿದ್ಧಾಂತಗಳ ಬಗ್ಗೆ ಉನ್ನತ ಮಟ್ಟದ ಸಂಶೋಧನೆ ಮಾಡಿರುವ ಅಕ್ಷಯ್ ಅವರಿಗೆ ಇದಾಗಲೇ  ಓಸ್ಟ್ರೋಸ್ಕಿ ಪ್ರಶಸ್ತಿ, ಇನ್ಫೋಸಿಸ್​ ಪ್ರಶಸ್ತಿ, ಸೇಲಂ ಪ್ರಶಸ್ತಿ, ರಾಮಾನುಜನ್ ಪ್ರಶಸ್ತಿ ಸೇರಿ ಅನೇಕ ಪುರಸ್ಕಾರಗಳು ಲಭಿಸಿದೆ.
ಫೀಲ್ಡ್ಸ್ ಮೆಡಲ್ ಪ್ರಶಸ್ತಿ ಬಗ್ಗೆ
ಫೀಲ್ಡ್ಸ್ ಮೆಡಲ್ ಪ್ರಶಸ್ತಿ ಗಣಿತಶಾಸ್ತ್ರದ ನೋಬೆಲ್ ಎಂದು ಗುರುತಿಸಿಕೊಂಡಿದೆ. ಸುಮಾರು 40ರ ವಯೋಮಾನದ ಅತ್ಯಂತ ಪ್ರತಿಭಾವಂತ ಗಣಿತಜ್ಞರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಇನ್ನು ಈ ಪ್ರಶಸ್ತಿಯನ್ನು ನಾಲ್ಕು ವರ್ಷಕ್ಕೊಮ್ಮೆ ನೀಡುತ್ತಾರೆ ಎನ್ನುವುದು ಗಮನಾರ್ಹ.
ಈ ಬಾರಿ .ಬ್ರೆಜಿಲ್ ರಿಯೋ ಡಿ ಜನೈರೊದಲ್ಲಿ ನಡೆದ ಅಂತಾರಾಷ್ಟ್ರೀಯ ಗಣಿತ ಸಮಾವೇಶದಲ್ಲಿ ಅಕ್ಷಯ್ ವೆಂಕಟೇಶ್ ಅವರಿಗೆ ಈ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಪ್ರಶಸ್ತಿಯು 15 ಸಾವಿರ ಕೆನಡಿಯನ್ ಡಾಲರ್ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಅಕ್ಷಯ್ ಜತೆಗೆ ಕೌಚರ್‌ ಬರ್ಕರ್‌ (ಇರಾನ್‌ ಕುರ್ಡಿಶ್‌ ಮೂಲದ, ಕ್ಯಾಂಬ್ರಿಜ್‌ ವಿವಿ ಪ್ರೊಫೆಸರ್‌), ಜರ್ಮನಿಯ ಪೀಟರ್‌ ಶೋಲ್‌ಜ್‌ (ಬಾನ್‌ ವಿವಿ ಬೋಧಕ), ಮತ್ತು ಅಲೆಸ್ಸಿಯೋ ಫಿಗಾಲಿ (ಇಟಿಝಡ್‌ ಜ್ಯುರಿಕ್‌ನಲ್ಲಿನ ಇಟಾಲಿಯನ್‌ ಗಣಿತಜ್ಞ) ಅವರುಗಳು ಸಹ ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ