ಬೆಂಗಳೂರು, ಆ.2- ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಲಾಲ್‍ಬಾಗ್‍ನಲ್ಲಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ತೋಟವಾರಿಕೆ ಇಲಾಖೆ ನಿರ್ದೇಶಕ ವೈ.ಎಸ್.ಪಾಟೀಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಇದು 208ನೆ ಫಲಪುಷ್ಪ ಪ್ರದರ್ಶನವಾಗಿದೆ. 1912ರಿಂದಲೂ ಲಾಲ್‍ಬಾಗ್‍ನಲ್ಲಿ ಪ್ರದರ್ಶನ ಹಮ್ಮಿಕೊಳ್ಳುತ್ತಾ ಬರಲಾಗಿದೆ ಎಂದು ಹೇಳಿದರು.
ಮೈಸೂರು ಉದ್ಯಾನ ಕಲಾ ಸಂಘದ ಆಶ್ರಯದಲ್ಲಿ ಆ.4ರಿಂದ 15ರವರೆಗೆ ಫಲಪುಷ್ಪ ಪ್ರದರ್ಶನ ಇರುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದವರು ಹಾಗೂ ದೇಶವನ್ನು ರಕ್ಷಿಸುತ್ತಿರುವ ಯೋಧರು, ಭಾರತದ ರಕ್ಷಣಾ ಪಡೆಗೆ ಈ ಬಾರಿ ವಿಶೇಷ ನಮನ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಮೂರು ವಿಭಾಗಗಳಾಗಿ ಮಾಡಲಾಗಿದೆ. ಒಂದು ಸೆಂಟ್ರಲ್. ಇದರಲ್ಲಿ 17 ತೀಮ್‍ಗಳಿವೆ, ಎರಡನೆಯದರಲ್ಲಿ ಏಳು ವಿಶೇಷ ಕಾರ್ಯಕ್ರಮಗಳಿರುತ್ತದೆ. ಮೂರನೆಯದರಲ್ಲಿ ಇಲಾಖೆ ವತಿಯಿಂದ ಆರು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಆ.4ರಂದು ಬೆಳಗ್ಗೆ 10 ಗಂಟೆಗೆ ಲಾಲ್‍ಬಾಗ್‍ನ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಇಕೆಬನಾ ಪ್ರದರ್ಶನದ ದಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಡಾ.ಜಯಮಾಲಾ ಅವರು ಆಗಮಿಸಲಿದ್ದಾರೆ. ವಾಯುಸೇನೆ, ಭೂ ಸೇನೆ, ನೌಕಾಸೇನೆಯನ್ನು ಗುಲಾಬಿ ಹೂವುಗಳಿಂದ ಸಿದ್ದಪಡಿಸಲಾಗಿದೆ. ಸೇನೆಗೆ ಯುವ ಜನತೆ ಹೆಚ್ಚು ಸೇರಬೇಕೆಂಬ ಉದ್ದೇಶದಿಂದ ಈ ಬಾರಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ.
ಸಿಯಾಚಿನ್ ಪ್ರದೇಶದಲ್ಲಿ 30 ಡಿಗ್ರಿ ಸೆಲ್ಸಿಯಸ್‍ನಲ್ಲಿ ನಮ್ಮ ಯೋಧರು ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎಂಬ ಬಗ್ಗೆ ಹೂಗಳಿಂದಲೇ ಚಿತ್ರಿಸಿರುವುದು ವಿಶೇಷವಾಗಿದೆ ಎಂದರು.
ಪ್ರದರ್ಶನದ 15 ದಿನಗಳ ವೇಳೆಯೂ ಮೂರರಿಂದ ನಾಲ್ಕು ಬಾರಿ ಪುಷ್ಪಗಳನ್ನು ಬದಲಾಯಿಸಲಾಗುತ್ತದೆ. ಈ ಬದಲಾವಣೆಗೆ ಒಂದು ಸಲಕ್ಕೆ 40 ಸಾವಿರ ರೂ. ವೆಚ್ಚವಾಗುತ್ತದೆ. 1.20 ಲಕ್ಷ ಹೂಗಳನ್ನು ಈ ರೀತಿ ಬದಲಾವಣೆ ಮಾಡಲಾಗುತ್ತದೆ ಎಂದು ವಿವರಿಸಿದರು.
ಉಪಗ್ರಹ ಉಡಾವಣೆ ಪಿಎಸ್‍ಎಲ್‍ವಿ, ಜಿಎಸ್‍ಎಲ್‍ವಿಗಳನ್ನು ಹೂಗಳಿಂದ ರಚಿಸಲಾಗಿದೆ. ಕನ್ನಡ ಚಿತ್ರರಂಗದ 85ರ ಸವಿ ನೆನಪನ್ನು 15 ಸಾವಿರ ಗುಲಾಬಿ ಹೂಗಳನ್ನು ಬಳಸಿ ಸಿದ್ಧಪಡಿಸಲಾಗಿದೆ.
ಶಾಲಾ ಮಕ್ಕಳಿಗೆ ಎಂಟು ದಿನ ಉಚಿತ ಪ್ರವೇಶವಿರುತ್ತದೆ. ನಾಲ್ಕು ದಿನ ರಜೆ ದಿನಗಳಿದ್ದು ಆ ದಿನಗಳಲ್ಲಿ ಶುಲ್ಕ ವಿಧಿಸಲಾಗುತ್ತದೆ ಎಂದು ವೈ.ಎಸ್‍ಪಾಟೀಲ್ ತಿಳಿಸಿದರು.
ಬಂದೋಬಸ್ತ್ : ಎಸಿಪಿ ಎಚ್.ಶ್ರೀನಿವಾಸ್ ಮಾನತಾಡಿ, ಲಾಲ್‍ಬಾಗ್‍ನ ಒಳ ಆವರಣ ಹಾಗೂ ಹೊರ ಆವರಣದಲ್ಲಿ ಮತ್ತು ಎಲ್ಲಾ ಗೇಟ್‍ಗಳಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಮೂವರು ಎಸಿಪಿಗಳು, 6 ಇನ್ಸ್‍ಪೆಕ್ಟರ್, 150 ಪೆÇಲೀಸ್ ಸಿಬ್ಬಂದಿ, 2 ಕೆಎಸ್‍ಆರ್‍ಪಿ ವ್ಯಾನ್, 100 ಹೋಂ ಗಾರ್ಡ್‍ಗಳನ್ನು ನೇಮಿಸಲಾಗುತ್ತದೆ. 100 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.