ಬೆಂಗಳೂರು, ಫೆ.28- ಮುಂದಿನ 48 ಗಂಟೆಗಳೊಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಜಲ್ಲಿ ಸುರಿದು ಜೆಸಿಬಿ ಲಾರಿ ನಿಲ್ಲಿಸುವ ಮೂಲಕ ಉಗ್ರ ಹೋರಾಟ ನಡೆಸಲಾಗುವುದು ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಎಚ್ಚರಿಸಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕ್ರಷರ್ ಕೋರೆ ಮಾಲೀಕರು ಮತ್ತು ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ 7ನೇ ದಿನಕ್ಕೆ ಕಾಲಿಟ್ಟಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ 48 ಗಂಟೆಗಳಲ್ಲಿ ಈ ಸಂಬಂಧ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದಲ್ಲಿ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ನಗರದ ಮೌರ್ಯ ವೃತ್ತದ ರಸ್ತೆಗಳ ಮೇಲೆ ಜಲ್ಲಿ ಸುರಿದು ಪ್ರತಿಭಟನೆ ನಡೆಸಿದ ಹೋರಾಟಗಾರರು ಸರ್ಕಾರದ ಸ್ಪಂದನೆ ದೊರೆಯದಿದ್ದರೆ, ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದರು.
ಎಂ ಸ್ಯಾಂಡ್ ಹಾಗೂ ಜಲ್ಲಿ ಸರಬರಾಜು ಇಲ್ಲದೆ ರಾಜ್ಯಾದ್ಯಂತ ಕಟ್ಟಡ ನಿರ್ಮಾಣ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ, ಜಲ್ಲಿ ಮತ್ತು ಎಂ ಸ್ಯಾಂಡ್ ಅಭಾವದಿಂದ ಅದೆಷ್ಟೋ ಕಾಮಗಾರಿಗಳು ಸ್ಥಗಿತಗೊಂಡಿವೆ. ಲಕ್ಷಾಂತರ ಕೂಲಿ ಕಾರ್ಮಿಕರು ವೇತನದಿಂದ ವಂಚಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ಮುಂದುವರಿದರೆ ಮತ್ತಷ್ಟು ತೊಂದರೆ ಎದುರಿಸಬೇಕಾದ ಆತಂಕ ಸೃಷ್ಟಿಯಾದ ಬೆನ್ನಲ್ಲೆ ಕ್ರಷರ್ ಮತ್ತು ಕೋರೆ ಮಾಲೀಕರು ಮತ್ತು ಕಾರ್ಮಿಕರು ಪ್ರತಿಭಟನೆಗೆ ಲಾರಿ ಮಾಲೀಕರ ಸಂಘದ ಬೆಂಬಲವೂ ವ್ಯಕ್ತವಾಗಿದೆ. ಹೀಗಾಗಿ ಸಾವಿರಾರು ಲಾರಿಗಳು ನಿತ್ಯದ ವ್ಯವಹಾರ ಸ್ಥಗಿತಗೊಳಿಸಿರುವುದರಿಂದ ಲಾರಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಾಳೆಯಿಂದ ರಾಜ್ಯಾದ್ಯಂತ ರಸ್ತೆಗಳಲ್ಲಿ ಜಲ್ಲಿ ಸುರಿದು ಪ್ರತಿಭಟನೆ ನಡೆಸುವುದರ ಜತೆಗೆ ಲಾರಿ ಮಾಲೀಕರ ಸಂಘದ ಅಧ್ಯಕ್ಷರೂ ಅದರಲ್ಲಿ ಭಾಗಿಯಾಗಲಿದ್ದಾರೆ ಎಂದು ಷಣ್ಮುಗಪ್ಪ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಜಲ್ಲಿ ಮತ್ತು ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ಸಂಜೀವ್ಹಟ್ಟಿ ಹೊಳೆ ಮತ್ತಿತರರು ಉಪಸ್ಥಿತರಿದ್ದರು.