ಹೈಕಮಾಂಡ್ ಎಚ್ಚರಿಕೆ ಸಂದೇಶದೊಂದಿಗೆ ಫೀಲ್ಡಿಗಿಳಿದ ಬಿಎಸ್ ವೈ

ಬೆಂಗಳೂರು: ರಾಜ್ಯದಲ್ಲಿ ಪ್ರತ್ಯೇಕ ರಾಜ್ಯದ ಬಗ್ಗೆ ಹೋರಾಟ ನಡೆಯುತ್ತಿದ್ದು, ಈಗ ಬಿಜೆಪಿ ಹೈಕಮಾಂಡ್ ಮಧ್ಯ ಪ್ರವೇಶಿಸಿ ಬಿಜೆಪಿಯವರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ.

ಯಾವುದೇ ಕಾರಣಕ್ಕೂ ಬಿಜೆಪಿ ಪ್ರತ್ಯೇಕತೆ ಪರ ನಿಲ್ಲಬಾರದು. ಪ್ರತ್ಯೇಕತೆ ಪರ ಮಾತನಾಡುವವರು ಬಾಯಿ ಮುಚ್ಚಬೇಕು. ಉತ್ತರ ಕರ್ನಾಟಕ ಭಾಗದ ಶಾಸಕರು, ನಾಯಕರುಗಳು ಪ್ರತ್ಯೇಕ ಬಗ್ಗೆ ಮಾತನಾಡಬಾರದು. ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಕಾಂಗ್ರೆಸ್ ದುಸ್ಥಿತಿ ನೋಡಿದ್ದೀರಲ್ಲ. ಪ್ರತ್ಯೇಕತೆ ಪರ ಮಾತನಾಡುವ ಉತ್ತರ ಕನ್ನಡದ ನಾಯಕರು ಇನ್ಮುಂದೆ ಸೈಲೆಂಟ್ ಆಗಬೇಕು. ಹಾಗಾಗಿ ಯಾರು ಮಾತನಾಡದಂತೆ ತಾಕೀತು ಮಾಡಿ ಎಂದು ಬಿಎಸ್‍ವೈಗೆ ಹೈಕಮಾಂಡ್‍ನಿಂದ ಸಂದೇಶ ರವಾನೆಯಾಗಿದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಅಷ್ಟೇ ಅಲ್ಲದೇ ಉತ್ತರ ಕರ್ನಾಟಕದ ಅಭಿವೃದ್ಧಿ ಪರ ಹೋರಾಟಗಳನ್ನ ನಡೆಸಲು ಪ್ಲಾನ್ ಮಾಡಿ. 13 ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿ ಸಮಗ್ರ ವರದಿ ತಯಾರಿಸಿ. ಹಿಂದುಳಿರುವ ಭಾಗಗಳ ಅಭಿವೃದ್ಧಿಗೆ ಪ್ಲಾನ್ ತಯಾರಿಸಿ ಆ ಭಾಗದ ಜನರ ಮುಂದಿಡಿ. ಇದರಿಂದಾಗಿ ರಾಜಕೀಯವಾಗಿಯೂ ನಮ್ಮ ಶಕ್ತಿ ಹಿಗ್ಗುತ್ತದೆ. ಆ ಭಾಗದ ಜನರಲ್ಲೂ ವಿಶ್ವಾಸ ಮೂಡುತ್ತದೆ. ಅದನ್ನು ಬಿಟ್ಟು ಪ್ರತ್ಯೇಕತೆ ಬಗ್ಗೆ ಮಾತನಾಡಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡಿದರೆ ನಾವು ಸಹಿಸಲ್ಲ ಎಂದು ಬಿಜೆಪಿ ಹೈಕಮಾಂಡ್ ನಿಂದ ರಕ್ಷಣಾತ್ಮಕ ನಡೆಯ ಸಂದೇಶ ರವಾನೆಯಾಗಿದೆ ಎಂದು ತಿಳಿದುಬಂದಿದೆ.

ಹೈಕಮಾಂಡ್ ಸಂದೇಶದೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಫೀಲ್ಡಿಗಿಳಿದು, ಪ್ರತ್ಯೇಕ ಹೋರಟ ಕೈಬಿಡುವಂತೆ ಬಿಜೆಪಿ ಶಾಸಕರ ಜೊತೆ ಯಡಿಯೂರಪ್ಪ ಸಭೆ ಮಾಡಿದ್ದಾರೆ. ಬೆಳಗಾವಿಯ ಖಾಸಗಿ ಹೋಟೆಲಿನಲ್ಲಿ ಉತ್ತರ ಕರ್ನಾಟಕ ಶಾಸಕರೊಂದಿಗೆ ಚರ್ಚೆ ನಡೆಸಿದ್ದು, ಹೈಕಮಾಂಡ್ ರವಾನಿಸಿರುವ ಎಚ್ಚರಿಕೆ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ