ಬೆಂಗಳೂರು:ಜು-೩೦: ರಾಜ್ಯದಲ್ಲಿ ಸುಮಾರು 49,000 ಕೋಟಿ ರೂ. ಗಳಷ್ಟು ಬೃಹತ್ ಮೊತ್ತದ ಕೃಷಿ ಸಾಲ ಮನ್ನಾ ಮಾಡಲಾಗಿದ್ದು, ಈ ಕುರಿತು ನಾಲ್ಕೈದು ದಿನಗಳಲ್ಲಿ ಸರ್ಕಾರಿ ಆದೇಶ ಹೊರಡಿಸಲಾಗುವುದು. ಈ ಯೋಜನೆಯನ್ನು ಪಾರದರ್ಶಕವಾಗಿ ಜಾರಿಗೊಳಿಸುವಂತೆ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಇಂದು ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಸಾಲ ಮನ್ನಾ ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸುವಲ್ಲಿ ಜಿಲ್ಲಾಧಿಕಾರಿಗಳ ಪಾತ್ರ ಮಹತ್ವದ್ದು ಎಂದು ನುಡಿದರು. ಮಧ್ಯವರ್ತಿಗಳು ಈ ಯೋಜನೆಯ ದುರುಪಯೋಗ ಪಡೆಯದಂತೆ ಎಚ್ಚರಿಕೆ ವಹಿಸಿ ಎಂದು ಅವರು ಕಿವಿ ಮಾತು ಹೇಳಿದರು.
ಜನರ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡಿ. ಪ್ರತಿ ತಿಂಗಳು ತಾಲ್ಲೂಕುಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ; ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಎಂದು ಸಲಹೆ ಮಾಡಿದರು.
ಚುನಾವಣೆಯ ಹಿನ್ನೆಲೆಯಲ್ಲಿ ಅಭಿವೃದ್ಧಿ ಕುಂಠಿತವಾಗಿತ್ತು. ಈಗ ಅಧಿಕಾರಿಗಳು ಚುರುಕಾಗಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಒಳ್ಳೆಯ ಕೆಲಸ ಮಾಡಿ ಸರ್ಕಾರಕ್ಕೆ ಒಳ್ಳೆಯ ಹೆಸರು ತನ್ನಿ ಎಂದು ಅವರು ನುಡಿದರು.
ಮಾಧ್ಯಮಗಳಲ್ಲಿ ಸರ್ಕಾರದ ಕುರಿತು ಪ್ರಕಟಿಸುವ ವರದಿಗಳಿಗಿಂತ ಅಭಿವೃದ್ಧಿಗೆ ಆದ್ಯತೆ ನೀಡಿ. ಈ ಸರ್ಕಾರ5 ವರ್ಷ ಯಶಸ್ವಿಯಾಗಿ ಪೂರ್ಣ ಗೊಳಿಸಲಿದೆ ಎಂದು ತಿಳಿಸಿದರು.
ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಿ ಸ್ಥಳೀಯ ಕಾರ್ಖಾನೆಗಳಲ್ಲಿ ಉದ್ಯೋಗ ಕೊಡಿಸಲು ಅವಕಾಶ ಕಲ್ಪಿಸಬೇಕು. ಜನ ಸಾಮಾನ್ಯರನ್ನು ನೇರವಾಗಿ ಭೇಟಿ ಮಾಡುವಂತೆ ಸೂಚಿಸಿದರು.
ಸರ್ಕಾರ ನಡೆಸುವ ವಸತಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ, ಮೂಲ ಸೌಕರ್ಯ ಆಹಾರ ಗುಣಮಟ್ಟ ಪರಿಶೀಲಿಸಬೇಕು. ಅದರಂತೆ, ಪ್ರಾಥಮಿಕ ಆರೋಗ್ಯ ಕೇಂದ್ರ ಗಳಿಗೂ ಭೇಟಿ ನೀಡಿ ಆಯಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಪ್ರೇರೇಪಿಸಿ ಎಂದು ಸಲಹೆ ನೀಡಿದರು.
ಶಾಲೆ ಕಾಲೇಜುಗಳಿಗೆ ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೊಠಡಿ, ಶೌಚಾಲಯ, ಪ್ರಯೋಗಾಲಯ ಮತ್ತಿತರ ಸೌಲಭ್ಯ ಒದಗಿಸಲು ಉದ್ದೇಶಿಸಿದೆ. ಅದೇ ರೀತಿ 4 ಸಾವಿರಕ್ಕೂ ಹೆಚ್ಚು ಕಿ.ಮೀ. ಹೆದ್ದಾರಿ ಕಾಮಗಾರಿ ಪೂರ್ಣ ಗೊಳಿಸಲು ಅಗತ್ಯ ಭೂಸ್ವಾಧೀನ ಮತ್ತಿತರ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ವಸತಿ ಯೋಜನೆಗಳಿಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಸರ್ಕಾರಿ ಜಮೀನು ಗುರುತಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು.
Chief Minister H.D. Kumaraswamy said that State Government has waived off agricultural loans to the tune of 49000 crore and a Government Order on guidelines will be issued soon. He directed All DCs and CEOs to implement Loan waiver scheme transparently.