ಐಟಿ ರಿಟರ್ನ್ ಸಲ್ಲಿಕೆ ದುಪ್ಪಟ್ಟು; ರಿಫ‌ಂಡ್‌ ಪ್ರಮಾಣ ಶೇ.81

ಹೊಸದಿಲ್ಲಿ : ಕಳೆದ ವಾರಾಂತ್ಯದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಐಟಿ ರಿಟರ್ನ್ ಸಲ್ಲಿಸಿರುವವರ ಸಂಖ್ಯೆ ಕಳೆದ ಬಾರಿಗಿಂತ ಈ ಬಾರಿ ದುಪ್ಪಟ್ಟಾಗಿದೆ; ಈ ಬಾರಿ ಸುಮಾರು ಮೂರು ಕೋಟಿ ಜನರು ಐಟಿ ರಿಟರ್ನ್ ಸಲ್ಲಿಸಿರುವುದಾಗಿ ಇಲಾಖೆಯ ಮೂಲಗಳು ತಿಳಿಸಿವೆ.

ತೆರಿಗೆ ಪಾವತಿದಾರರು ಮತ್ತು ಕನ್‌ಸಲ್ಟೆಂಟ್‌ಗಳ ಒತ್ತಡಕ್ಕೆ ಮಣಿದು ಸರಕಾರ ಐಟಿ ರಿಟರ್ನ್ ಸಲ್ಲಿಕೆಯ ಗಡುವನ್ನು ಆ.31ರ ವರೆಗೆ ವಿಸ್ತರಿಸಿದೆ.

ಈ ಬಾರಿ ಐಟಿ ರಿಫ‌ಂಡ್‌ ಕೇಸುಗಳ ಸಂಖ್ಯೆ 65 ಲಕ್ಷ ದಾಟಿದ್ದು ಇದು ಶೇ.81ರಷ್ಟಾಗಿದೆ. ಕಳೆದ ವರ್ಷ ಐಟಿ ರಿಫ‌ಂಡ್‌ 57,551 ಕೋಟಿ ರೂ ಆಗಿತ್ತು. ಈ ಬಾರಿ ಅದು ಶೇ.35ರಷ್ಟು ಹೆಚ್ಚಿದ್ದು ಈ ವರಗಿನ ಐಟಿ ರಿಫ‌ಂಡ್‌ 77,700 ಕೋಟಿ ರೂ. ಆಗಿರುವುದಾಗಿ ಮೂಲಗಳು ತಿಳಿಸಿವೆ.

ರಿಫ‌ಂಡ್‌ಗಳನ್ನು ಬಾಕಿ ಇರಿಸದೆ ಎಷ್ಟು ಸಾಧ್ಯವೋ ಅಷ್ಟು ಬೇಗನೆ ಇತ್ಯರ್ಥಪಡಿಸಬೇಕೆಂಬ ಎನ್‌ಡಿಎ ಸರಕಾರದ ಜನಸ್ನೇಹಿ ನೀತಿಯು ಹೊಸ ವ್ಯವಸ್ಥೆಯಲ್ಲಿನ ಚುರುಕಿನ ಪ್ರಕ್ರಿಯೆಗೆ ಪೂರಕವಾಗಿದೆ.

ಈ ಬಾರಿ ಶೇ.60ರಷ್ಟು ಐಟಿ ರಿಟರ್ನ್ ಗಳು  ಆನ್‌ ಲೈನ್‌ ಮೂಲಕ ಸಲ್ಲಿಕೆಯಾಗಿವೆ. ಇಷ್ಟೂ ಪ್ರಮಾಣದ ರಿಟರ್ನ್ ಗಳನ್ನು ಈಗಾಗಲೇ ಸಂಸ್ಕರಿಸಲಾಗಿದೆ.

ಈ ಬಾರಿ 1.25 ಕೋಟಿ ಹೊಸ ಆದಾಯ ತೆರಿಗೆ ಪಾವತಿದಾರರನ್ನು ಸೇರಿಸಿಕೊಳ್ಳುವುದು ಸರಕಾರದ ಗುರಿಯಾಗಿದೆ. ಕಳೆದ ವರ್ಷ 1.06 ಕೋಟಿ ಹೊಸ ಐಟಿ ಪಾವತಿದಾರರನ್ನು ಸೇರಿಸಿಕೊಳ್ಳಲಾಗಿತ್ತು.

ತಡವಾಗಿ ಐಟಿ ರಿಟರ್ನ್ ಸಲ್ಲಿಸುವವರಿಗೆ ದಂಡ ಶುಲ್ಕ ಹೇರುವ ಸರಕಾರದ ಕ್ರಮದಿಂದಾಗಿ ಈ ಬಾರಿ ತ್ವರಿತ ಗತಿಯಲ್ಲಿ ಅತ್ಯಧಿಕ ಸಂಖ್ಯೆಯ ಐಟಿ ರಿಟರ್ನ್ ಗಳು  ಸಲ್ಲಿಕೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಕಳೆದ ಗುರುವಾರದ ವರೆಗೆ ಸಲ್ಲಿಕೆಯಾಗಿರುವ ಇ-ಐಟಿ-ರಿಟರ್ನ್ ಸಂಖ್ಯೆ 3.07 ಕೋಟಿ . 2017ರ ಜು.26ರ ವರಗೆ ಸಲ್ಲಿಸಲ್ಪಟ್ಟಿದ್ದ ಐಟಿ ರಿಟರ್ನ್ಗಳ ಸಂಖ್ಯೆ 1.07 ಕೋಟಿ. ಎಂದರೆ ಈ ಬಾರಿ ಶೇ.82ರ ಹೆಚ್ಚಳವನ್ನು ಸಾಧಿಸಲಾಗಿದೆ.

2016-17ರ ಹಣಕಾಸು ವರ್ಷದಲ್ಲಿ ಸಲ್ಲಿಸಲಾಗಿದ್ದ ಐಟಿ ರಿಟರ್ನ್ ಸಂಖ್ಯೆ 1.4 ಕೋಟಿ; 2017-18ರ ಹಣಕಾಸು ವರ್ಷದಲ್ಲಿ ಸಲ್ಲಿಕೆಯಾಗಿರುವ ಐಟಿ ರಿಟರ್ನ್ ಸಂಖ್ಯೆ 2.96 ಕೋಟಿ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ