ಬೆಂಗಳೂರು: ನಿವೇಶನಕ್ಕಾಗಿ ಕಟ್ಟಿದ್ದ ನೌಕರರ ಹಣವನ್ನು ಕೆಎಸ್ ಆರ್ ಟಿಸಿಯ ಗೃಹನಿರ್ಮಾಣದ ಅಧಿಕಾರಿಗಳು ನುಂಗಿ ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಸಂಘದ ಮಾಜಿ ಅಧ್ಯಕ್ಷರಾದ ಮಂಜುನಾಥ್, ಪುರುಷೋತ್ತಮ, ಹಾಗೂ ಮತ್ತಿತರರು ಸಂಘಕ್ಕೆ ಬಂದಿದ್ದ ಹಣವನ್ನ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಈಗಿನ ಅಧ್ಯಕ್ಷರಾದ ವಿಶ್ವೇಶ್ವರಯ್ಯರವರು ನೌಕರರಿಗೆ ಪತ್ರದ ಮೂಲಕ ಅವ್ಯವಹಾರವನ್ನು ತಿಳಿಸಿದ್ದಾರೆ.
ನೌಕರರು ಸ್ವಂತ ಮನೆ ನಿರ್ಮಾಣಕ್ಕಾಗಿ ತಮ್ಮ ಉಳಿಕೆ ಹಣವನ್ನು ಕೆಎಸ್ಆರ್ ಟಿಸಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಕಟ್ಟುತ್ತಿದ್ದಾರೆ. ಈ ಸಂಬಂಧವಾಗಿ ನೆಲಮಂಗಲ ಬಳಿ ಸಾರಿಗೆ ನಗರ ನಿರ್ಮಾಣ ಮಾಡಲು ಸಾರಿಗೆ ಇಲಾಖೆ ಕೆಹೆಚ್ಬಿ ಮತ್ತು ಸುಪ್ರೀಂ ಡೆವಲಪರ್ಸ್ ಜೊತೆ ಒಪ್ಪಂದವನ್ನು ಮಾಡಿಕೊಂಡು ಸುಮಾರು 110 ಎಕರೆ ಜಾಗವನ್ನ ಗುರುತಿಸಿ ಲೇಔಟ್ ಮಾಡಿತ್ತು. ಆದರೆ ಸಾರಿಗೆ ಇಲಾಖೆಯ ಗೃಹ ನಿರ್ಮಾಣ ಸಂಘದ ಪದಾಧಿಕಾರಿಗಳು ನೌಕರರ ಹಣವನ್ನ ಲೇಔಟ್ ನಿರ್ಮಾಣಕ್ಕೆ ಬಳಸದೇ ಅಕ್ರಮ ಎಸಗಿದ್ದಾರೆ ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.
ಸಂಘದಲ್ಲಿ ಒಟ್ಟು 936 ಜನ ಹಣ ಪಾವತಿ ಮಾಡಿದ್ದು ಒಟ್ಟು 44 ಕೋಟಿ ರೂಪಾಯಿ ಆಗಿತ್ತು. ಆದರೆ ಇತ್ತೀಚಿನ ಆಡಿಟರ್ ವರದಿಯಲ್ಲಿ 14 ಕೋಟಿ ವಂಚನೆಯಾಗಿರುವುದು ಬೆಳಕಿಗೆ ಬಂದಿದೆ. ಈಗ ಇಲ್ಲಿ ನಿವೇಶನ ಬೇಕಾದರೆ ಅಡಿಗೆ 150 ರೂ.ನಂತೆ ಅಂತೆ ಪಾವತಿಸಿ ಎಂದು ನೌಕರರಿಗೆ ವಿಶ್ವೇಶ್ವರಯ್ಯನವರು ಪತ್ರದಲ್ಲಿ ತಿಳಿಸಿದ್ದಾರೆ.
ನಿವೃತ್ತ ನೌಕರರು, ನಿವೇಶನ ಸಿಗುತ್ತೆ ಎಂದು 13 ವರ್ಷಗಳಿಂದ ಕಾದು ಕುಳಿತ್ತಿದ್ದು, ಇದೀಗ ಏಕಾಏಕಿ ಹಣ ಕಟ್ಟಿ ಎಂದರೆ ಎಲ್ಲಿಂದ ಹಣ ತರೋದು ಅಂಥ ಯೋಚಿಸಿ, ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಕೋರ್ಟ್ ಕೂಡ ಅದಷ್ಟು ಬೇಗ ಲೇಔಟ್ ನಿರ್ಮಾಣ ಮಾಡಿ ನಿವೇಶನ ಹಂಚಿ ಎಂದು ಸಂಘಕ್ಕೆ ತಿಳಿಸಿತ್ತು. ಆದರೆ ಸಂಘ ಮಾತ್ರ ನಮ್ಮ ಹತ್ತಿರ ಹಣ ಇಲ್ಲ ಅಂತಾ ಕೈಚಲ್ಲಿ ಕೂತಿದೆ. ನಿವೃತ್ತಿ ನಂತರವು ನೌಕರರಿಗೆ ನೆಮ್ಮದಿ ಇಲ್ಲದಾಂತಗಿದ್ದು, ನಿವೇಶನಕ್ಕೆ ಹಣ ಪಾವತಿ ಮಾಡಿದ್ದ ನೌಕರರಲ್ಲಿ 34 ಜನ ಮೃತಪಟ್ಟಿದ್ದಾರೆ. ಈಗ ನಾವು ಸಾಯುವ ಮುಂಚೆ ನಿವೇಶನ ನೀಡುತ್ತಾರಾ ಎಂದು ನೌಕರರು ಕಾಯುತ್ತಿದ್ದಾರೆ