ವಿಶಾಖಪಟ್ಟಣಂ, ಫೆ.28-ಬೀದಿ ನಾಯಿಗಳು ನಡೆಸಿದ ದಾಳಿಯಲ್ಲಿ ಒಂಭತ್ತು ವರ್ಷದ ಬಾಲಕನೊಬ್ಬ ಸಾವಿಗೀಡಾದ ದುರಂತ ಆಂಧ್ರಪ್ರದೇಶದ ವಿಶಾಖಪಟ್ಟಣಂ ಸಮೀಪದ ಬಲಿಜಿಪೇಟಾದ ಅಮ್ಮಪಲ್ಲಿ ಗ್ರಾಮದಲ್ಲಿ ನಡೆದಿದೆ.
ಸರ್ಕಾರಿ ಶಾಲೆಯಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆರ್. ಜಸ್ವಂತ್ ಶ್ವಾನಗಳ ದಾಳಿಯಿಂದ ಮೃತಪಟ್ಟ ದುರ್ದೈವಿ.
ತೋಟದ ಬಳಿ ಹೋಗುತ್ತಿದ್ದಾಗ ಬೀದಿ ನಾಯಿಗಳ ಹಿಂಡೊಂದು ಬಾಲಕನ ಮೇಲೆ ದಾಳಿ ಮಾಡಿ ಕಚ್ಚಿದವು. ತೀವ್ರ ಗಾಯಗೊಂಡ ಬಾಲಕ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯುಸಿರೆಳೆದ.
ದೇಶದ ವಿವಿಧ ಭಾಗಗಳಲ್ಲಿ ನಾಯಿಗಳ ದಾಳಿಯಿಂದ ಸಾವು-ನೋವು ಸಂಭವಿಸುತ್ತಲೇ ಇವೆ. ಕೇರಳದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ನಾಯಿಗಳ ದಾಳಿ ನಡೆದಿದೆ. ಅಲ್ಲಿ ಒಂದು ವರ್ಷದಲ್ಲಿ 53,000 ಪ್ರಕರಣಗಳು ವರದಿಯಾಗಿವೆ. ನಾಲ್ಕು ತಿಂಗಳ ಹಿಂದೆ ಕೇರಳದಲ್ಲಿ ವೃದ್ದೆ ಮತ್ತು ಬೆಸ್ತನೊಬ್ಬನ ಮೇಲೆ ನಾಯಿಗಳು ದಾಳಿ ಮಾಡಿ ಕೊಂದಿದ್ದವು.