ಹೊಸದಿಲ್ಲಿ: ಈಶಾನ್ಯ ಭಾರತ ಕಾಂಗ್ರೆಸ್ ಮುಕ್ತವಾಗುವುದು ಸನಿಹವಾಗಿದೆ. ಈಶಾನ್ಯದ ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ವಿಧಾನಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆ ಬಹಿರಂಗವಾಗಿದ್ದು, ಎರಡು ರಾಜ್ಯಗಳಲ್ಲಿ ಬಿಜೆಪಿ, ಒಂದರಲ್ಲಿ ಎನ್ ಪಿಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ.
2014ರ ಸಾರ್ವತ್ರಿಕ ಚುನಾವಣೆ ಬಳಿಕ ನಡೆದ ಅಸ್ಸಾಂ, ಮಣಿಪುರ ಮತ್ತು ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಧೂಳೀಪಟವಾಗಿತ್ತು. ಈಶಾನ್ಯದ ಮೇಘಾಲಯ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ. ಇದೀಗ ಅದನ್ನುಕಳೆದುಕೊಳ್ಳುವ ಸಾಧ್ಯತೆ ಇದೆ.
ಇದೇ ತಿಂಗಳಲ್ಲಿ ನಡೆದ ಈಶಾನ್ಯದ ಮೂರು ರಾಜ್ಯಗಳ ವಿಧಾನಸಭೆಯ ಮತಗಟ್ಟೆ ಸಮೀಕ್ಷೆಯನ್ನು ನ್ಯೂಸ್ ಎಕ್ಸ್ ಪ್ರಕಟಿಸಿದೆ.
ತ್ರಿಪುರಾ: ತ್ರಿಪುರಾದಲ್ಲಿ 25 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಸಿಪಿಎಂ ಸರ್ಕಾರ ಬದಲಾಗಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಮತಗಟ್ಟೆ ಸಮೀಕ್ಷೆ ಪ್ರಕಾರ, 60 ಸದಸ್ಯ ಬಲ ಹೊಂದಿರುವ ಬಿಜೆಪಿ ಮತ್ತು ಮಿತ್ರ ಪಕ್ಷಗಳು 45-50 ಸ್ಥಾನಗಳನ್ನು ಪಡೆಯಲಿವೆ, ಇನ್ನು ಆಡಳಿತಾರೂಢ ಸಿಪಿಎಂ ನೇತೃತ್ವದ ಮಾಣಿಕ್ ಸರ್ಕಾರ್ ಸರ್ಕಾರ 9-10 ಸ್ಥಾನಗಳನ್ನು ಮಾತ್ರ ಪಡೆಯಲಿದೆ.
ನಾಗಾಲ್ಯಾಂಡ್: ಬಿಜೆಪಿ ನೇತೃತ್ವದ ಮೈತ್ರಿ ಕೂಟ 27-32 ಸ್ಥಾನಗಳನ್ನು ಪಡೆದು ಅಧಿಕಾರದ ಗದ್ದುಗೆ ಏರಲಿದೆ. ಆಡಳಿತ ರೂಢ ಎನ್ ಪಿಎಫ್ 20-25 ಸ್ಥಾನಗಳನ್ನು, ಕಾಂಗ್ರೆಸ್ 0-2 ಸ್ಥಾನಗಳನ್ನು ಪಡೆಯಲಿದೆ.
ಮೇಘಾಲಯ: ಬಿಜೆಪಿಗೆ 8-12, ಕಾಂಗ್ರೆಸ್ ಗೆ 13-17 , ಎನ್ ಪಿ ಪಿಗೆ 23-27 ಸ್ಥಾನಗಳು ಬರುವ ಸಾಧ್ಯತೆ ಇದೆ ಎಂದು ನ್ಯೂಸ್ ಎಕ್ಸ್ ಮತಗಟ್ಟೆ ಸಮೀಕ್ಷೆ ತಿಳಿಸಿದೆ. ಆ ಮೂಲಕ ಕಾಂಗ್ರೆಸ್ ಅಧಿಕಾರ ಕೆಳೆದು ಕೊಳ್ಳುವ ಸಾಧ್ಯತೆ ಇದೆ.