ಲಾರಿ ಮಾಲೀಕರ ಅನಿರ್ದಿಷ್ಟಾವಧಿ ಮುಷ್ಕರ: ಸರಕು ಸಾಗಾಣಿಕೆಯಲ್ಲಿ ಭಾರೀ ವ್ಯತ್ಯಯ

ಬೆಂಗಳೂರು, ಜು.20- ಟೋಲ್ ಮುಕ್ತಗೊಳಿಸುವುದು, ಥರ್ಡ್‍ಪಾರ್ಟಿ ವಿಮಾ ಪಾಲಿಸಿ ದರ ಕಡಿತಗೊಳಿಸುವುದು, ಡೀಸೆಲ್‍ನನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವುದೂ ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ಲಾರಿ ಮಾಲೀಕರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿರುವುದರಿಂದ ಸರಕು ಸಾಗಾಣಿಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.

ರಾಜ್ಯ ಹಾಗೂ ದೇಶಾದ್ಯಂತ 90 ಲಕ್ಷ ಸರಕು ಸಾಗಾಣಿಕೆಯ ಲಾರಿಗಳು, ಗೂಡ್ಸ್ ವ್ಯಾನ್‍ಗಳು ರಸ್ತೆಗಿಳಿಯದೆ ಸಂಚಾರ ಸ್ಥಗಿತಗೊಳಿಸಿದ್ದರಿಂದ ಸರಕು ಸಾಗಾಣಿಕೆಯಲ್ಲಿ ವ್ಯತ್ಯಯ, ಅದನ್ನು ನಂಬಿ ಬದುಕುತ್ತಿರುವ ಅವಲಂಬಿತರ ಬದುಕಿನಲ್ಲೂ ತೊಂದರೆ ಎದುರಾಗಿದೆ.

ವಾಣಿಜ್ಯ ವಾಹನಗಳು ರಸ್ತೆಯಲ್ಲಿ ಸಾಗಾಟ ಸ್ಥಗಿತಗೊಳಿಸಿ, ಇಂದು ಮುಂಜಾನೆ ಮುಷ್ಕರ ಪ್ರಾರಂಭವಾದ್ದರಿಂದ ಹಲವು ಸರಕುಗಳು ಮಾರುಕಟ್ಟೆ ತಲುಪಿಲ್ಲ. ಇದರ ಬಿಸಿ ನಾಳೆಯಿಂದ ಜನಸಾಮಾನ್ಯರಿಗೆ ತಟ್ಟಲಿದೆ.

ಔಷಧಿ, ಹಾಲು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಎಂದಿನಂತೆ ಈ ವಸ್ತುಗಳ ಸಾಗಾಟ ನಡೆಯಲಿದೆ ಎಂದು ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ತಿಳಿಸಿದ್ದಾರೆ.

ದೇಶಾದ್ಯಂತ ಇರುವ 412 ಟೊಲ್ ಪ್ಲಾಜಾಗಳಲ್ಲಿ ಸುಮಾರು 160 ಟೋಲ್‍ಗಳ ನಿರ್ಮಾಣ ವೆಚ್ಚ ಸೇರಿದಂತೆ ಕೋಟ್ಯಂತರ ರೂ. ಲಾಭಗಳಿಸಿದ್ದರೂ ಅಂತಹ ಟೋಲ್‍ಗಳನ್ನು ಮುಕ್ತಗೊಳಿಸಬೇಕಾಗಿತ್ತು. ಬದಲಾಗಿ ಸಾಗಾಣೆದಾರರಿಂದ ನಿರಂತರ ಹಣ ವಸೂಲಿ ಮಾಡುವ ಮೂಲಕ ಸಾವಿರಾರು ಕೋಟಿ ರೂ.ಗಳನ್ನು ಕೊಳ್ಳೆ ಹೊಡೆಯಲಾಗುತ್ತಿದೆ.

ಡೀಸೆಲ್ ದರವನ್ನು ಜಿಎಸ್‍ಟಿ ವ್ಯಾಪ್ತಿಗೆ ತರಬೇಕು. ಟಿಡಿಎಸ್ ರದ್ದುಗೊಳಿಸುವುದು, ಪೂರ್ವಭಾವಿ ಆದಾಯ ಕಾಯ್ದೆ ಪರಿವರ್ತಿಸಬೇಕು. ಇ-ವೇ ಬಿಲ್ ಕುರಿತ ಸಮಸ್ಯೆಯನ್ನು ಪರಿಹರಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೆವು. ಅವರು ಪರಿಹರಿಸದ ಕಾರಣ ಪ್ರತಿಭಟನೆಯ ಹಾದಿ ಹಿಡಿದಿದ್ದೇವೆ. ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ಮುಂದುವರೆಸುವುದಾಗಿ ಷಣ್ಮುಗಪ್ಪ ಎಚ್ಚರಿಸಿದ್ದಾರೆ.

Truck Operators Strike, Continue Till Government Meets Demands

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ