ಮೆಟ್ರೋ ರೈಲ್ವೆ ನಿಲ್ದಾಣ ನಿರ್ಮಾಣ: ಇನ್ಫೋಸಿಸ್ ಫೌಂಡೇಶನ್ ಮತ್ತು ಬಿಎಂಆರ್‍ಸಿಎಲ್ ನಡುವೆ ಒಪ್ಪಂದಕ್ಕೆ ಸಹಿ

ಬೆಂಗಳೂರು, ಜು.19- ಎಲೆಕ್ಟ್ರಾನಿಕ್ ಸಿಟಿಯ ಕೋನಪ್ಪನಅಗ್ರಹಾರ ಬಳಿ ವಿಶ್ವಕ್ಕೆ ಮಾದರಿಯಾದ ಅತ್ಯಾಧುನಿಕ ಮೆಟ್ರೋ ರೈಲ್ವೆ ನಿಲ್ದಾಣ ನಿರ್ಮಾಣಕ್ಕೆ ಇನ್ಫೋಸಿಸ್ ಫೌಂಡೇಶನ್ ಮತ್ತು ಬಿಎಂಆರ್‍ಸಿಎಲ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ವಿಧಾನಪರಿಷತ್‍ನ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಎಚ್.ಡಿ.ರೇವಣ್ಣ, ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್, ಯು.ಟಿ.ಖಾದರ್, ಜಮೀರ್‍ಅಹಮ್ಮದ್ ಖಾನ್, ಜಯಮಾಲ, ಶಾಸಕರಾದ ಕೃಷ್ಣಪ್ಪ, ಮೇಯರ್ ಸಂಪತ್‍ರಾಜ್ ಮತ್ತಿತರರ ಸಮ್ಮುಖದಲ್ಲಿ ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಅಜಯ್‍ಸೇಠ್ ಮತ್ತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರಾದ ಸುಧಾಮೂರ್ತಿ ಅವರು ಒಡಂಬಡಿಕೆಗೆ ಸಹಿ ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಇನ್ಪೋಸಿಸ್ ಸಂಸ್ಥೆ ತಾನು ಗಳಿಸಿದ ಒಂದಿಷ್ಟು ಲಾಭವನ್ನು ಸಾಮಾಜಿಕ ಅಭಿವೃದ್ಧಿ ಕೆಲಸಗಳಿಗೆ ಬಳಸುತ್ತಿದೆ. ಕ್ಯಾನ್ಸರ್ ರೋಗ ಹಾಗೂ ಶಿಕ್ಷಣ ಅಭಿವೃದ್ಧಿಗೆ ಸಹಕಾರ ನೀಡಿದ್ದು, ಇತರೆ ಸಂಸ್ಥೆಗೆ ಮಾದರಿಯಾಗಿದೆ. ಎಂದು ಹೇಳಿದರು.
ಮೆಟ್ರೋ ಬೆಂಗಳೂರಿಗೆ ಅತ್ಯಗತ್ಯವಾಗಿ ಬೇಕಾಗಿದೆ. 2006ರಲ್ಲಿ ಆಗಿನ ಪ್ರಧಾನಿ ಡಾ.ಮನಮೋಹನ್‍ಸಿಂಗ್ ಅವರು ಮೆಟ್ರೋಗೆ ಅಡಿಗಲ್ಲು ಹಾಕಿದರು. ಆಗ ನಾನು ಮುಖ್ಯಮಂತ್ರಿಯಾಗಿದ್ದು ನನ್ನ ಸೌಭಾಗ್ಯ. ಈವರೆಗೂ ಮೊದಲ ಹಂತದ 47 ಕಿ.ಮೀ. ಕಾಮಗಾರಿ ಪೂರ್ಣಗೊಂಡು ಎರಡನೇ ಹಂತದ ಕಾಮಗಾರಿ ಆರಂಭವಾಗಿದೆ. ಇನ್ಫೋಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರದಲ್ಲಿ ಮೆಟ್ರೋ ನಿಲ್ದಾಣ ಮತ್ತು ರೈಲ್ವೆ ಹಳಿಗಳ ನಿರ್ಮಾಣಕ್ಕೆ ಹಣ ಕೊಡುತ್ತಿದೆ. 30 ವರ್ಷಗಳವರೆಗೂ ನಿರ್ವಹಣೆಯ ಒಡಂಬಡಿಕೆಗೆ ಸಹಿ ಹಾಕಿದೆ ಎಂದು ಹೇಳಿದರು.

ಸುಧಾಮೂರ್ತಿ ಅವರು ವಿಶ್ವದ ನಾನಾ ದೇಶಗಳಿಗೆ ಭೇಟಿ ಕೊಟ್ಟಿದ್ದಾರೆ. ಆದರೆ, ತಾಯ್ನಾಡಿಗೆ ಸೇವೆ ಸಲ್ಲಿಸುವಾಗ ಸಿಗುವ ತೃಪ್ತಿ ಬೇರೆ ಎಲ್ಲೂ ಇಲ್ಲ ಎಂಬ ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಅವರು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡುವುದಾದರೂ ಅದಕ್ಕೆ ನಮ್ಮ ಬೆಂಬಲವಿದೆ. ಅವರ ಹೃದಯ ವೈಶಾಲ್ಯತೆಯನ್ನು ಬಳಸಿಕೊಳ್ಳುತ್ತೇವೆ ಎಂದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಬೆಂಗಳೂರು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ನಗರ. ಇಲ್ಲಿನ ಸಂಚಾರಿ ದಟ್ಟಣೆ ಕಡಿಮೆ ಮಾಡಲು ಮೆಟ್ರೋ ಯೋಜನೆಗೆ ಕುಮಾರಸ್ವಾಮಿ ಅಡಿಗಲ್ಲು ಹಾಕಿದರು. ಮೊದಲ ಹಂತದ ಯೋಜನೆಯಲ್ಲಿ 5 ಲಕ್ಷ ಜನ ಸಂಚರಿಸುತ್ತಿದ್ದಾರೆ. ಎರಡನೇ ಹಂತ ಪೂರ್ಣಗೊಂಡರೆ 25 ಲಕ್ಷ ಜನ ಸಂಚಾರ ಮಾಡುವ ನಿರೀಕ್ಷೆ ಇದೆ ಎಂದು ಹೇಳಿದರು.

ಇಸ್ಲಾಂ ಧರ್ಮದಲ್ಲಿ ತಾವು ಗಳಿಸಿದ ಲಾಭದ ಶೇ.2ರಷ್ಟನ್ನು ದಾನ ಮಾಡಬೇಕು (ಜಾಕಾತ್) ಎಂಬ ಉಲ್ಲೇಖವಿದೆ. ಕಾಪೆರ್Çರೇಟ್ ಸಂಸ್ಥೆಗಳ ಲಾಭದಲ್ಲಿ ಶೇ.2ರಷ್ಟನ್ನು ಸಾಮಾಜಿಕ ಅಭಿವೃದ್ಧಿ ಕೆಲಸಗಳಿಗೆ ಬಳಸುವಂತೆ ಕೇಂದ್ರ ಸರ್ಕಾರ ಕಾನೂನು ರೂಪಿಸಿದೆ. ಇನ್ಫೋಸಿಸ್‍ನಂತೆ ಇತರೆ ಕಾಪೆರ್Çರೇಟ್ ಸಂಸ್ಥೆಗಳೂ ಇದನ್ನು ಪಾಲಿಸಬೇಕು. ಸುಧಾಮೂರ್ತಿ ಅವರ ನಡವಳಿಕೆಗಳು ಎಲ್ಲರಿಗೂ ಮಾದರಿ ಎಂದರು.

ಸಮ್ಮಿಶ್ರ ಸರ್ಕಾರ ಐದು ವರ್ಷ ಅಧಿಕಾರ ಪೂರ್ಣಗೊಳಿಸಲಿದೆ. ಏನೇ ಆಗಲಿ ಯಾವುದೇ ಹೊಂದಾಣಿಕೆಯಾದರೂ ಸರಿ ನಾವು ಅವಧಿ ಪೂರ್ಣಗೊಳಿಸುತ್ತೇವೆ. ಈ ಬಗ್ಗೆ ಯಾರಿಗೂ ಯಾವುದೇ ಅನುಮಾನ ಬೇಡ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

ಸುಧಾಮೂರ್ತಿ ಅವರು ಮಾತನಾಡಿ, ನಾಡಿಗೆ ಮಾಡುವ ಸೇವೆ ತಾಯಿಗೆ ಮಾಡಿದಂತೆ. ಇದು ಉಪಕಾರ ಅಲ್ಲ. ನನ್ನ ಕರ್ತವ್ಯ. ನನಗೆ ಒಡವೆ, ವಸ್ತ್ರ, ಪ್ರವಾಸಕ್ಕಿಂತಲೂ ಹೆಚ್ಚು ತೃಪ್ತಿ ನೀಡುವುದು ಜನ ಸೇವೆಯಲ್ಲಿ. ಮಾತಿಗಿಂತಲೂ ಕೆಲಸ ಹೆಚ್ಚು ಮಾಡುವ ಮನೋಭಾವ ನನ್ನದು ಎಂದು ಹೇಳಿದರು.

ಯೋಜನೆ ವಿವರ:
ಎಲೆಕ್ಟ್ರಾನಿಕ್‍ಸಿಟಿ ಬಳಿಯ ಕೋನಪ್ಪನ ಅಗ್ರಹಾರ ಬಳಿ 2 ಲಕ್ಷ ಚದರ ಅಡಿ ವ್ಯಾಪ್ತಿಯಲ್ಲಿ ಇನ್ಫೋಸಿಸ್, ಮೆಟ್ರೋ ರೈಲ್ವೆ ನಿಲ್ದಾಣ ನಿರ್ಮಿಸಲಿದೆ. ನಿಲ್ದಾಣದ ಒಳಗೆ 3ಸಾವಿರ ಚದರ ಅಡಿ ಪ್ರದೇಶವನ್ನು ಇನ್ಫೋಸಿಸ್ ಫೌಂಡೇಶನ್‍ಗೆ ಮೀಸಲಿಡಲಾಗುತ್ತದೆ. ಈ ಜಾಗದಲ್ಲಿ ಸ್ಥಳೀಯ ಕಲಾವಿದರು, ಕರಕುಶಲ ಕರ್ಮಿಗಳಿಗೆ ತಮ್ಮ ಪ್ರತಿಮೆ ಅನಾವರಣಕ್ಕೆ ಮತ್ತು ಉಚಿತ ವಸ್ತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ರೈಲ್ವೆ ನಿಲ್ದಾಣದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿ ಅದರಿಂದ ಉತ್ಪತ್ತಿಯಾಗುವ ವಿದ್ಯುತ್‍ನನ್ನು ಬೆಳಕಿನ ವ್ಯವಸ್ಥೆಗೆ ಬಳಸಲಾಗುವುದು. ಈ ನಿಲ್ದಾಣಕ್ಕೆ ಇನ್ಫೋಸಿಸ್ ಫೌಂಡೇಶನ್ ಎಂದು ಹೆಸರಿಡಲಾಗುತ್ತದೆ

agreement signed, between the Infosys Foundation and BMRCL,construction of a Metro railway station

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ