ಮುಂಗಾರು ಅಧಿವೇಶನಕ್ಕೆ ಗದ್ದಲದ ಆರಂಭ; ಮುಗಿ ಬಿದ್ದ ವಿಪಕ್ಷಗಳು, ಕೇಂದ್ರ ವಿರುದ್ಧದ ಅವಿಶ್ವಾಸ ನಿರ್ಣಯ ಅಂಗೀಕಾರ

ಹೊಸದಿಲ್ಲಿ: ಸಂಸತ್‌ನ ಮುಂಗಾರು ಅಧಿವೇಶನ ಬುಧವಾರ ಆರಂಭವಾಗಿದ್ದು,ಸದನ ಆರಂಭವಾಗುತ್ತಿದ್ದಂತೆ ಟಿಡಿಪಿ ಸಂಸದರು ಆಂಧ್ರಕ್ಕೆ ವಿಶೇಷ ಸ್ಥಾನ ಮಾನ ನೀಡುವಂತೆ ಆಗ್ರಹಿಸಿ ತೀವ್ರ ಗದ್ದಲ ಉಂಟುಮಾಡಿದ್ದಾರೆ.
ಸರ್ಕಾರ ರೈತರ ನಿರಂತರ ಆತ್ಮಹತ್ಯೆಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಗಳನ್ನು ತಡೆಯುವಲ್ಲಿ ವಿಫ‌ಲವಾಗಿದೆ ಎಂದು ಕಾಂಗ್ರೆಸ್‌ ಸಂಸದ ಜ್ಯೋತಿರಾಧಿತ್ಯ ಸಿಂಧ್ಯಾ ಅವರು ಅವಿಶ್ವಾಸ ಗೊತ್ತುವಳಿ ಮಂಡಿಸಿದರು. 12 ಪಕ್ಷಗಳ ವಿಪಕ್ಷದ ಸಂಸದರು ಗೊತ್ತುವಳಿಗೆ ಬೆಂಬಲ ಸೂಚಿಸಿದ್ದಾರೆ.
ಅವಿಶ್ವಾಸ ನಿರ್ಣಯಕ್ಕೆ ಸಮ್ಮತಿ: 50 ಕ್ಕೂ ಹೆಚ್ಚು ಸಂಸದರ ಸಹಿ ಇರುವ ಕಾರಣಕ್ಕೆ ಅವಿಶ್ವಾಸ ನಿರ್ಣಯ ಮಂಡನೆ ಪ್ರಸ್ತಾಪಕ್ಕೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಸಮ್ಮತಿ ನೀಡಿದ್ದು, 10 ದಿನಗಳೊಳಗೆ ಚರ್ಚೆ ನಡೆಸಲು ದಿನ ನಿಗದಿ ಮಾಡುವ ಸಾಧ್ಯತೆಗಳಿವೆ.
ಸಮಾಜವಾದಿ ಪಕ್ಷದ ಸದಸ್ಯರು ಗುಂಪು ಹತ್ಯೆ ಮತ್ತು ಹಿಂಸಾಚಾರಗಳನ್ನು ಖಂಡಿಸಿ ಘೋಷಣೆಗಳನ್ನು ಕೂಗಿದ್ದಾರೆ.
ಕೇಂದ್ರದ ಆಡಳಿತಾರೂಢ ಎನ್’ಡಿಎ ಸರ್ಕಾರದ ವಿರುದ್ದ ವಿರೋಧ ಪಕ್ಷಗಳ ಮಂಡನೆ ಮಾಡಿದ್ದು, ಈ ಕುರಿತು ಜುಲೈ.20 ರಂದು ಲೋಕಸಭೆಯಲ್ಲಿ, ಜು.23 ರಂದು ರಾಜ್ಯಸಭೆಯಲ್ಲಿ ಚರ್ಚೆ ನಡೆಯಲಿದೆ.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಕೆ ನಿರಾಕರಣೆಗೆ ಸಂಬಂಧಿಸಿದಂತೆ ಕೇಂದ್ರದ ಆಡಳಿತಾರೂಢ ಎನ್’ಡಿಎ ಸರ್ಕಾರದ ವಿರುದ್ದ ಸಂಸತ್ತಿನಲ್ಲಿ ಕಾಂಗ್ರೆಸ್ ಹಾಗೂ ತೆಲುಗು ದೇಶಂ ಪಕ್ಷ (ಟಿಡಿಪಿ) ಅವಿಶ್ವಾಸ ನಿರ್ಣಯ ಮಂಡನೆ ಮಾಡಿತ್ತು.
ಈ ಅವಿಶ್ವಾಸ ನಿರ್ಣಯ ಮಂಡನೆಯನ್ನು ಅಂಗೀಕರಿಸಿರುವ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಜುಲೈ.20 ರಂದು ಲೋಕಸಭೆಯಲ್ಲಿ, ಜು.23 ರಂದು ರಾಜ್ಯಸಭೆಯಲ್ಲಿ ಈ ಕುರಿತು ಚರ್ಚೆಗೆ ಅವಕಾಶ ನೀಡಿದ್ದಾರೆಂದು ತಿಳಿದುಬಂದಿದೆ.
ಸಹಕಾರಕ್ಕೆ ಪ್ರಧಾನಿ ಮನವಿ
ಅಧಿವೇಶನಕ್ಕೂ ಮುನ್ನ ಸಂಸತ್‌ ಮುಂಭಾಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ‘ಎಲ್ಲಾ ಪಕ್ಷಗಳ ಸದಸ್ಯರು ಸಂಸತ್‌ನ ಅಮೂಲ್ಯವಾದ ಸಮಯವನ್ನು ಪರಸ್ಪರ ಸಹಕಾರದ ಮೂಲಕ ಸದುಪಯೋಗ ಪಡಿಸಿಕೊಳ್ಳುವ ವಿಶ್ವಾಸವಿದೆ. ಸರ್ಕಾರ ಎಲ್ಲಾ ವಿಚಾರಗಳ ಕುರಿತಾಗಿ ಚರ್ಚೆಗೆ ಸಿದ್ಧವಿದೆ. ನಾವು ನಮ್ಮ ಹೆಚ್ಚಿನ ಕಾರ್ಯಕ್ಷಮತೆಯೊಂದಿಗೆ ರಾಜ್ಯಗಳ ವಿಧಾನ ಸಭೆಗಳಿಗೆ ಹೆಚ್ಚಿನ ಸ್ಫೂರ್ತಿಯನ್ನು ತುಂಬಬೇಕಾಗಿದೆ ಎಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ