ಬೆಂಗಳೂರು, ಜು.17- ರಾಜ್ಯದ ಮುಖ್ಯಮಂತ್ರಿ ಸಂತೋಷವಾಗಿದ್ದರೆ ರಾಜ್ಯವೂ ಸಂತೋಷವಾಗಿರುತ್ತದೆ. ಹೀಗಾಗಿ ನಾವೆಲ್ಲರೂ ಸೇರಿ ಸರ್ಕಾರವನ್ನು ಬಲಪಡಿಸಬೇಕಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆಡಳಿತ ನಡೆಸಲು ನಾವೆಲ್ಲ ಸಹಕರಿಸೋಣ. ಚಿಕ್ಕಂದಿನಿಂದಲೂ ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಅವರೊಂದು ರೀತಿ ಭಾವನಾತ್ಮಕ ಜೀವಿ. ಈ ಹಿಂದೆ ಸಾಕಷ್ಟು ವಿಚಾರಗಳಲ್ಲಿ ಅವರು ಕಣ್ಣೀರು ಹಾಕಿದ್ದು, ಇದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವಿಕಲಚೇತನರನ್ನು ನೋಡಿ ಅವರು ಕಣ್ಣೀರು ಹಾಕಿದ್ದಿದ್ದೆ. ಹೀಗಾಗಿ ಅವರು ಸ್ವಲ್ಪ ಭಾವನಾತ್ಮಕ ಜೀವಿ ಎಂದು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಎಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕಿದ್ದ ಬಗ್ಗೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಪಕ್ಷದ ತಾಂತ್ರಿಕ ವಿಚಾರದ ಬಗ್ಗೆ ಯಾರೂ ಕೂಡ ಬಹಿರಂಗ ಹೇಳಿಕೆ ನೀಡುವುದು ಬೇಡ ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಸೇರಿದಂತೆ ಇತರೆ ಕಾಂಗ್ರೆಸ್ ಮುಖಂಡರು ನೀಡಿದ್ದ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದರು.
ಈಗಾಗಲೇ ಹೇಳಿಕೆ ನೀಡಲಾಗಿದ್ದು, ಮುಂದೆ ಯಾರೂ ಕೂಡ ಈ ರೀತಿಯ ಹೇಳಿಕೆಗಳನ್ನು ನೀಡುವುದು ಬೇಡ ಎಂದು ಸಲಹೆ ಮಾಡಿದರು.
ಬಿಜೆಪಿಯವರಿಗೆ ಅಷ್ಟೊಂದು ಆತುರ ಬೇಡ. ದಕ್ಷಿಣ ಭಾರತದ ಯಾವುದೋ ಮೂಲೆಯಲ್ಲಿ ನಾವು ಆಡಳಿತ ಮಾಡುತ್ತಿದ್ದೇವೆ. ಸ್ವಲ್ಪ ದಿನ ಕಾದು ನಮ್ಮ ಆಡಳಿತ ನೋಡಬೇಕು. ಆತುರ ಪಡುವುದು ಬೇಡ. ಸಂಪುಟ ವಿಸ್ತರಣೆ ಬಗ್ಗೆ ಕಾಂಗ್ರೆಸ್ನ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ಡಿ.ಕೆ.ಶಿವಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದರು.