ನವದೆಹಲಿ:ಜು-೧೭: ಕೇಂದ್ರ ಸರ್ಕಾರ ಮದರ್ ಥೆರೇಸಾಗೆ ಸಂಬಂಧಪಟ್ಟ ಮಿಶನರೀಸ್ ಆಫ್ ಚಾರಿಟಿ ಸೇರಿದಂತೆ, ಮಕ್ಕಳ ಆರೈಕೆ ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಿರುವ ಎಲ್ಲ ಸಂಸ್ಥೆಗಳೂ ನಿಗಾ ಇಡುವಂತೆ ರಾಜ್ಯ ಸರ್ಕಾರಗಳಿಗೆ ಆದೇಶ ಹೊರಡಿಸಿದೆ.
ಈ ಬಗ್ಗೆ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರು ಆದೇಶ ಹೊರಡಿಸಿದ್ದು, ತೆರೇಸಾ ಮಿಷನರಿಗಳೂ ಸೇರಿದಂತೆ ಮಕ್ಕಳ ಆರೈಕೆ ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಿರುವ ಎಲ್ಲ ಚಾರಿಟಿ ಮತ್ತು ಸಂಸ್ಥೆಗಳು ಕಡ್ಡಾಯವಾಗಿ ಪ್ರಾಧಿಕಾರದೊಂದಿಗೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಆದೇಶ ಹೊರಡಿಸಿದ್ದಾರೆ.
‘ಮಕ್ಕಳ ಆರೈಕೆ ಸಂಸ್ಥೆಗಳನ್ನು ಸಾಕಷ್ಟು ಹಿಂದೆಯೇ ಲಿಂಕ್ ಮಾಡಬೇಕಿತ್ತು. ಈ ಸಂಸ್ಥೆಗಳಿಗೆ ಇದೇ ವಿಚಾರವಾಗಿ ಡಿಸೆಂಬರ್ 1, 2017ರ ಡೆಡ್ಲೈನ್ ವಿಧಿಸಲಾಗಿತ್ತು.ಆದರೆ ಈ ಪ್ರಕ್ರಿಯೆಯನ್ನು ತುರ್ತಾಗಿ ಮಾಡಬೇಕಾದ ಅಗತ್ಯವಿದೆ’ ಎಂದು ಕೇಂದ್ರ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಜಾರ್ಖಂಡ್ ನ ರಾಂಚಿಯಲ್ಲಿ ಮಕ್ಕಳ ಕಳ್ಳಸಾಗಾಟದಲ್ಲಿ ಭಾಗಿಯಾಗಿದ್ದ ಮಿಷನರಿಯ ಇಬ್ಬರು ದಾದಿಯರನ್ನು ಪೊಲೀಸರು ಬಂಧಿಸಿದ್ದರು. ಮಕ್ಕಳ ಕಳ್ಳಸಾಗಾಟದ ದಂಧೆಯ ಭಾಗವಾಗಿದ್ದ ಇಬ್ಬರು ದಾದಿಯರು ಜಾರ್ಖಂಡ್ ಹಾಗು ಉತ್ತರ ಪ್ರದೇಶದಲ್ಲಿ ನಾಲ್ಕು ಹಸುಗೂಸುಗಳನ್ನು ಮಾರಾಟ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದರು.
ಬಾಲ ನ್ಯಾಯ ಕಾಯಿದೆಗೆ 2015ರಲ್ಲಿ ಮಹತ್ವದ ತಿದ್ದುಪಡಿ ತಂದಿದ್ದ ಕೇಂದ್ರ ಸರ್ಕಾರ, ಈ ಎಲ್ಲ ಮಕ್ಕಳ ಆರೈಕೆ ಕೇಂದ್ರಗಳನ್ನು ನೋಂದಣಿ ಮಾಡುವುದನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಿತ್ತು. ಆದರೆ ದೇಶದ ಕೆಲ ಅನಾಥಾಶ್ರಮಗಳು ಕೇಂದ್ರ ಸರ್ಕಾರದ ಈ ನಡೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದವು.
Baby-selling scandal,Govt asks, all state govts to inspect Missionaries of Charity child care homes