ಮಳವಳ್ಳಿ, ಜು.16- ಕೊಡಗು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆ ಹೇಮಾವತಿ, ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯದ ಕ್ರಸ್ಟ್‍ಗೇಟ್‍ಗಳಿಂದ ನೀರು ಬಿಡುಗಡೆ ಮಾಡಿರುವ ಪರಿಣಾಮ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು ತಾಲ್ಲೂಕಿನ ಶಿವನಸಮುದ್ರ (ಬ್ಲಫ್) ಗಗನಚುಕ್ಕಿ ಜಲಪಾತ ಭೋರ್ಗರೆಯುತ್ತಿದೆ. ಈ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ತಾಲ್ಲೂಕಿನನಿಂದ ಸುಮಾರು 23 ಕಿ.ಮೀ ದೂರದಲ್ಲಿ ಇರುವ ಶಿವನಸಮುದ್ರ (ಬ್ಲಫ್)ನಲ್ಲಿ ನಯಾಗರ ಜಲಪಾತ ಎಂದೇ ಪ್ರಸಿದ್ಧಿ ಪಡೆದಿರುವ ಗಗನಚುಕ್ಕಿ ಜಲಪಾತವು ಭೋರ್ಗರೆದು ಧುಮ್ಮಿಕ್ಕುವ ದೃಶ್ಯ ನಯನ ಮನೋಹರವಾಗಿದ್ದು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಆದರೆ ಪ್ರವಾಸಿಗರು ಜಲಪಾತಕ್ಕೆ ಬಂದು ಹೋಗಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಒಂದು ಐತಿಹಾಸಿಕ ಪ್ರಕೃತಿ ಸೊಬಗಿನಿಂದ ಕೂಡಿದ್ದು ಗಗನಚುಕ್ಕಿ ಮತ್ತು ಭರಚುಕ್ಕಿ ಅವಳಿ ಜಲಪಾತಗಳನ್ನೊಳಗೊಂಡಿರುವ ತಾಣ ಇಲ್ಲಿ ಇತಿಹಾಸ ಪ್ರಸಿದ್ಧ ಮಧ್ಯ ರಂಗನಾಥಸ್ವಾಮಿ, ಪ್ರಸನ್ನ ಮೀನಾಕ್ಷಿ , ಆದಿಶಕ್ತಿ ಮಾರಮ್ಮನ ದೇವಸ್ಥಾನ, ದರ್ಗಾ ಸೇರಿದಂತೆ ಅನೇಕ ಯಾತ್ರ ಸ್ಥಳಗಳಿವೆ. ರಜಾ ದಿನಗಳಲ್ಲಿ ಸಾವಿರಾರು ಯಾತ್ರಿಕರು ಹಾಗೂ ಪ್ರವಾಸಿಗರು ಬಂದು ಹೋಗುತ್ತಾರೆ. ಗಗನಚುಕ್ಕಿ ಮತ್ತು ಭರಚುಕ್ಕಿ ಮಾರ್ಗದಲ್ಲಿ ಸಂಚಾರ ಹೆಚ್ಚಾಗಿದ್ದು, ಪೆÇಲೀಸರು ಹರಸಾಹಸ ಪಡುವಂತಾಗಿದೆ. ಸೇತುವೆಯ ಎರಡು ಕಡೆ ಸಿಬ್ಬಂದಿಯನ್ನು ನಿಲ್ಲಿಸಿ ಮೊಬೈಲ್ ಸಂದೇಶ ನೀಡುವ ಮೂಲಕ ವಾಹನಗಳು ಏಕ ಮುಖವಾಗಿ ಸಂಚರಿಸುವ ವ್ಯವಸ್ಥೆಯನ್ನು ಮಾಡುತ್ತಿದ್ದರು. ಗಗನಚುಕ್ಕಿ ಜಲಪಾತದಲ್ಲಿ ಇದೇ ಮೊದಲು ಮುಂಗಾರಿಗೆ ಮೊದಲ ಮೈದುಂಬಿ ಧುಮ್ಮಿಕ್ಕುತ್ತಿದೆ. ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಹೋಗುತ್ತಿದ್ದಾರೆ. ರಜಾ ದಿನಗಳಲ್ಲಿ ಜನಸಾಗರವೇ ಜಲಪಾತದತ್ತ ಬರುತ್ತಿದೆ. ಜಲಪಾತಕ್ಕೆ ಬಂದು ಹೋಗುವವರಿಗೆ ಒಳ್ಳೆಯ ರಸ್ತೆ ಇಲ್ಲ. ಅಗತ್ಯ ಸೌಲಭ್ಯಗಗಳು ಇಲ್ಲ. ಆದ ಕಾರಣ ಸರ್ಕಾರ ಕೂಡಲೇ ಪ್ರವಾಸಿಗರ ಸಮಸ್ಯೆಯನ್ನು ಬಗೆಹರಿಸುವ ಕಾರ್ಯವನ್ನು ಮಾಡಬೇಕಿದೆ.