ಬೆಂಗಳೂರು, ಜು.16- ಮಹಾಪೌರರ ಬದಲಾವಣೆಯ ಮಹತ್ವದ ಸಂದರ್ಭದಲ್ಲಿ ಮಹಾಪೌರರಿಗೆ ವಿಶೇಷ ಸಮಾರಂಭ ಏರ್ಪಡಿಸಿ ಸಾಂಕೇತಿಕವಾಗಿ ಬೆಳ್ಳಿ ಕೀ ಮತ್ತು ಬ್ಯಾಟನ್ ಹಸ್ತಾಂತರಿಸುವ ಹೊಸ ಸಂಪ್ರದಾಯಕ್ಕೆ ಮೇಯರ್ ಸಂಪತ್ರಾಜ್ ಅವರು ನಾಂದಿ ಹಾಡಲಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮೇಯರ್ ಬದಲಾವಣೆಯಾದಾಗ ಈ ವಿಶೇಷ ಸಂಪ್ರದಾಯ ಆಚರಣೆಯನ್ನು ಜಾರಿಗೆ ತರುವ ಬಗ್ಗೆ ಬಜೆಟ್ನಲ್ಲಿ ಘೋಷಿಸಿದ್ದಂತೆ ಅನುಷ್ಠಾನಗೊಳಿಸಲು ಸಂಪತ್ರಾಜ್ ಅವರು ಮುಂದಾಗಿದ್ದಾರೆ.
ಅದರಂತೆ ಪ್ರಸ್ತುತ ಮೇಯರ್ ಚುನಾವಣೆ ಸಂದರ್ಭದಲ್ಲಿ ಮೇಯರ್ ಬದಲಾವಣೆಯಾದಾಗ ಬೆಳ್ಳಿ ಕೀ ಮತ್ತು ಬ್ಯಾಟನ್ ಹಸ್ತಾಂತರಿಸುವ ಸಮಾರಂಭ ನಡೆಸಲು ನಿರ್ಧರಿಸಿದ್ದಾರೆ.
ನೂತನ ಮೇಯರ್ಗೆ ಅಧಿಕಾರ ಹಸ್ತಾಂತರ ವೇಳೆ ನಿರ್ಗಮಿತ ಮೇಯರ್ ಅವರಿಂದ ಬೆಳ್ಳಿ ಕೀ ಮತ್ತು ಬ್ಯಾಟನ್ನನ್ನು ಹಸ್ತಾಂತರಿಸುವ ಈ ಹೊಸ ಸಂಪ್ರದಾಯವನ್ನು ಆಚರಿಸಲು ಮುಂದಾಗಿದ್ದಾರಲ್ಲದೆ, ನೂತನ ಆಯುಕ್ತರು ಅಧಿಕಾರ ವಹಿಸಿಕೊಳ್ಳುವಾಗ ಕೆಎಂಸಿ ಕಾಯ್ದೆ ಪುಸ್ತಕ ನೀಡಿ ಅಧಿಕಾರ ಹಸ್ತಾಂತರ ಮಾಡುವ ಸಂಪ್ರದಾಯಕ್ಕೂ ಚಾಲನೆ ನೀಡಲಿದ್ದಾರೆ.
2018-19 ಸಾಲಿನಲ್ಲಿ ಬಜೆಟ್ ಪುಸ್ತಕದಲ್ಲಿ ಬಜೆಟ್ನಲ್ಲಿ ಘೋಷಿಸಿದ್ದಂತೆ ಹೊಸ ಸಂಪ್ರದಾಯವನ್ನು ಪರಿಚಯಿಸಲು ಮುಂದಾದ ಮೇಯರ್ ಸಂಪತ್ರಾಜ್ ಅವರಿಗೆ ಪಾಲಿಕೆ ವಲಯದಲ್ಲಿ ಪ್ರಸಂಸೆ ವ್ಯಕ್ತವಾಗಿದೆ.