ಮಹಾಸಮರದ ಕಟ್ಟಕಡೆಯ ರೋಚಕ ಘಟ್ಟಕ್ಕೆ ರಷ್ಯಾ ಸಜ್ಜು

MOSCOW, RUSSIA - JUNE 12 A Russian tourism shop selling a 2018 FIFA World Cup Russia football with flags of the competing nations on it in Moscow ahead of the 2018 FIFA World Cup Russia on June 12, 2018 in Moscow, Russia. (Photo by Matthew Ashton - AMA/Getty Images)

ಮಾಸ್ಕೋ, ಜು.15-ಕಾಲ್ಚೆಂಡಿನ ಮಹಾಸಮರದ ಕಟ್ಟಕಡೆಯ ರೋಚಕ ಘಟ್ಟಕ್ಕೆ ರಷ್ಯಾ ಸಜ್ಜಾಗಿದೆ. ಬಲಿಷ್ಠ ತಂಡಗಳಾದ ಫ್ರಾನ್ಸ್ ಮತ್ತು ಕ್ರೊವೇಷ್ಯಾ ನಡುವೆ ಫೈನಲ್ ಹಣಾಹಣಿ ಕದನ ಕೌತುಕ ಸೃಷ್ಟಿಸಿದೆ. ಇಲ್ಲಿನ ಲುಜ್‍ನಿಕಿ ಕ್ರೀಡಾಂಗಣಗಳಲ್ಲಿ ಇಂದು ರಾತ್ರಿ ನಡೆಯುವ ಅಂತಿಮ ಹಣಾಹಣಿಯಲ್ಲಿ ಈ ಎರಡು ಪ್ರಬಲ ತಂಡಗಳು ಇದೇ ಮೊಲದ ಬಾರಿಗೆ ಫೈನಲ್‍ನಲ್ಲಿ ಮುಖಾಮುಖಿಯಾಗಿದ್ದು, ಫಲಿತಾಂಶ ವಿಶ್ವದಾದ್ಯಂತ ಅಪಾರ ಕುತೂಹಲ ಕೆರಳಿಸಿದೆ. ಕ್ರೀಡಾಂಗಣದಲ್ಲಿ 78,011 ಮಂದಿ ಪಂದ್ಯ ನೋಡಲು ಅವಕಾಶ ಕಲ್ಪಿಸಲಾಗಿದೆ. ಟೆಲಿವಿಷನ್ ಮೂಲಕ ವಿವಿಧ ದೇಶಗಳ ಕೋಟ್ಯಂತರ ಅಭಿಮಾನಿಗಳು ಈ ರೋಚಕ ಪಂದ್ಯ ವೀಕ್ಷಿಸಿ ರೋಮಾಂಚನಗೊಳ್ಳಲಿದ್ದಾರೆ. ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಫೈನಲ್ ತಲುಪಿ ಚಾರಿತ್ರಿಕ ದಾಖಲೆ ಮಾಡಿರುವ ಕ್ರೊವೇಷ್ಯಾ ಪ್ರಥಮ ಬಾರಿ ವಿಶ್ವಕಪ್ ಗೆಲ್ಲಲ್ಲು ತುದಿಗಾಲಲ್ಲಿ ನಿಂತಿದ್ದರೆ, ಎರಡನೇ ಬಾರಿ ಪ್ರಶಸ್ತಿ ಮುಡಿಗೇರಿಸಲು ಫ್ರಾನ್ಸ್ ಹಾತೊರೆಯುತ್ತಿದೆ.
ರೋಚಕ ಒಂದನೇ ಸೆಮಿಫೈನಲ್‍ನಲ್ಲಿ ಬೆಲ್ಜಿಯಂ ವಿರುದ್ಧ 1-0 ಗೋಲಿನಿಂದ ಫ್ರಾನ್ಸ್ ಫೈನಲ್ ತಲುಪಿದ್ದರೆ, ಎರಡನೇ ಸೆಮಿಫೈನಲ್‍ನಲ್ಲಿ ಬಲಿಷ್ಠ ಇಂಗ್ಲೆಂಡ್ ವಿರುದ್ಧ 2-1 ಗೋಲಿನ ಅಂತರದಿಂದ ಕ್ರೊವೇಷ್ಯಾ ಅಂತಿಮ ಘಟ್ಟ ಪ್ರವೇಶಿಸಿದೆ. ಒಂದು ಬಾರಿ ವಿಶ್ವಕಪ್ ಪ್ರಶಸ್ತಿ ಗೆದ್ದಿರುವ ಫ್ರಾನ್ಸ್, ಕ್ರೊವೇಷ್ಯಾದ ಆಟಗಾರರ ಆಕ್ರಮಣಕಾರಿ ತಂತ್ರಗಳನ್ನು ಲಘುವಾಗಿ ಪರಿಗಣಿಸಿಲ್ಲ. ಹೀಗಾಗಿ ಇಂದಿನ ಫೈನಲ್ ಪಂದ್ಯ ಮದಗಜಗಳ ತೀವ್ರ ಹೋರಾಟಕ್ಕೆ ಸಾಕ್ಷಿಯಾಗಲಿದೆ.
1998ರಲ್ಲಿ ವಿಶ್ವಕಪ್ ಫುಟ್ಬಾಲ್ ಪ್ರಶಸ್ತಿ ಗೆದ್ದಿದ್ದ ಫ್ರಾನ್ಸ್ ಅಂದಿನ ಸೆಮಿಫೈನಲ್‍ನಲ್ಲಿ ಕ್ರೊವೇಷ್ಯಾ ತಂಡವನ್ನು 2-1 ಗೋಲುಗಳಿಂದ ಮಣಿಸಿತ್ತು. ಆಗ ಫ್ರಾನ್ಸ್ ತಂಡದ ನಾಯಕನಾಗಿದ್ದ ಡೈಡಿಯರ್ ಡೆಶ್ಟಾಂಪ್ಸ್ ಫೆಂಚ್ ಆಟಗಾರರ ಕೋಚ್ ಆಗಿ ತಂಡವನ್ನು ಫೈನಲ್‍ವರೆಗೂ ಕರೆ ತಂದಿದ್ದಾರೆ. 20 ವರ್ಷಗಳ ಹಿಂದೆ ತಮ್ಮ ತಂಡವನ್ನು ಸೋಲಿಸಿದ ಫ್ರಾನ್ ಮೇಲೆ ಹಾಗೂ ಆಗಿನ ನಾಯಕ ಮತ್ತು ಈಗಿನ ಕೋಚ್ ಡೈಡಿಯರ್ ಮೇಲೂ ಸೇಡು ತೀರಿಸಿಕೊಳ್ಳಲು ಕ್ರೊವೇಷ್ಯಾಗೆ ಇಂದು ಉತ್ತಮ ಅವಕಾಶ ಒದಗಿ ಬಂದಿದ್ದು, ಪ್ರತೀಕಾರದೊಂಧಿಗೆ ವಿಶ್ವಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿದೆ.
ಫಿಫಾ ವಿಶ್ವಕಪ್ 2018ರಲ್ಲಿ ಫ್ರಾನ್ಸ್ ಪ್ರಶಸ್ತಿ ಗಳಿಸಿದರೆ ಡೈಡಿಯರ್‍ಗೆ ಡಬ್ಬಲ್ ಧಮಾಕದ ಸಂಭ್ರಮ. 1998ರಲ್ಲಿ ನಾಯಕರಾಗಿ ಫ್ರಾನ್ಸ್‍ನನ್ನು ಗೆಲ್ಲಿಸಿದ ಹಾಗೂ 20 ವರ್ಷಗಳ ಬಳಿಕ ಕೋಚ್ ಆಗಿಯೂ ತಂಡ ಮತ್ತೊಮ್ಮೆ ಪ್ರಶಸ್ತಿ ಎತ್ತಿ ಹಿಡಿಯು ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.
ಎರಡು ವರ್ಷಗಳ ಹಿಂದೆ ಯುರೋ ಕಪ್ ಟೂರ್ನಿಯ ಫೈನಲ್‍ನಲ್ಲಿ ಪರಾಭವಗೊಂಡಿದ್ದ ಫ್ರಾನ್ಸ್ ಈ ಬಾರಿ ವಿಶ್ವಕಪ್ ಗೆದ್ದು ಆ ಸೋಲಿನ ಕಹಿ ಮರೆಯುವ ಉತ್ಸಾಹದಲ್ಲಿದೆ. ಮೊದಲ ಬಾರಿ ಫೈನಲ್ ಪ್ರವೇಶಿಸಿರುವ ಕ್ರೊವೇಷ್ಯಾ ತಂಡವನ್ನು ಫ್ರೆಂಚ್ ಪಟುಗಳು ಲಘುವಾಗಿ ಪರಿಗಣಿಸಿಲ್ಲ. ಹಾಗಯೇ ಫ್ರಾನ್ಸ್ ತಂಡವನ್ನು ಬಗ್ಗುಬಡಿದು ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಕ್ರೊವೇಷ್ಯಾ ಕೊನೆ ಕ್ಷಣದವರೆಗೂ ಹೋರಾಡುವ ಛಲ ಹೊಂದಿದೆ. ಈ ಎಲ್ಲ ಕಾರಣಗಳಿಂದಲೂ ಫೈನಲ್ ಕ್ಷಣಂಕ್ಷಣಂ ಕುತೂಹಲಂ ಎಂಬಂತಾಗಿದೆ. ಒಟ್ಟಾರೆ ಈ ಪಂದ್ಯ ಜಗತ್ತಿನಾದ್ಯಂತ ಅಪಾರ ಆಸಕ್ತಿ ಕೆರಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ