ಮಿರ್ಜಾಪುರ್(ಉತ್ತರ ಪ್ರದೇಶ), ಜು.15- ಈ ಹಿಂದೆ ಆಡಳಿತ ನಡೆಸಿದ ವಿರೋಧ ಪಕ್ಷಗಳ ಸರ್ಕಾರಗಳು ಜನರನ್ನು ಸಂಪೂರ್ಣ ನಿರ್ಲಕ್ಷಿಸಿದ್ದು, ಅಭಿವೃದ್ಧಿ ಯೋಜನೆಗಳನ್ನು ವಿಳಂಬ ಮಾಡಿದೆವು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಉತ್ತರ ಪ್ರದೇಶದ ಮಿರ್ಜಾಪುರ್‍ನಲ್ಲಿ ಜನಸಾಗರ ಕಾಲುವೆ ಯೋಜನೆ ಉದ್ಘಾಟನೆ ಮತ್ತು ಮಿರ್ಜಾಪುರ್ ಮೆಡಿಕಲ್ ಕಾಲೇಜಿಗೆ ಶಿಲ್ಯಾಸ ನೆರವೇರಿಸಿದ ನಂತರ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸೇರದಂತೆ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
ಇಂದು ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ವಿರೋಧ ಪಕ್ಷಗಳು ತಮ್ಮ ಅಧಿಕಾರಾವಧಿಯಲ್ಲಿ ನೀರಾವರಿ ಯೋಜನೆಗಳನ್ನು ಏಕೆ ಪೂರೈಸಲಿಲ್ಲ ಎಂದು ಪ್ರಶ್ನಿಸಿದ ಮೋದಿ, ಇವರು ಅಧಿಕಾರದಲ್ಲಿ ಇರುವಷ್ಟು ಕಾಲ ಅದು ಅಪೂರ್ಣವಾಗಿಯೇ ಇತ್ತು ಎಂದು ಟೀಕಿಸಿದರು. ಯೋಜನೆಗಳನ್ನು ಅಪೂರ್ಣಗೊಳಿಸಿದ್ದೇ ಹಿಂದಿನ ಸರ್ಕಾರಗಳ ಸಾಧನೆ ಎಂದು ಲೇವಟಿ ಮಾಡಿದ ಅವರು, 50 ವರ್ಷಗಳ ಕಾಲ ದೇಶ ಆಳಿದ ಕಾಂಗ್ರೆಸ್ ಪಕ್ಷ ಮಾಡದ ಸಾಧನೆಯನ್ನು ಎನ್‍ಡಿಎ ಸರ್ಕಾರ ಕೇವಲ ನಾಲ್ಕೇ ವರ್ಷಗಳಲ್ಲಿ ಪೂರ್ಣಗೊಳಿಸಿದೆ ಎಂದು ಮೋದಿ ಹೆಮ್ಮೆಯಿಂದ ಹೇಳಿಕೊಂಡರು.