ಅಷ್ಟಬಂಧನ ಬಾಲಾಲಯ ಮಹಾಸಂಪ್ರೋಕ್ಷಣಮ್‌: 6 ದಿನ ತಿಮ್ಮಪ್ಪನ ದರ್ಶನವಿಲ್ಲ

ತಿರುಪತಿ: ಆಗಸ್ಟ್‌ 11 ರಿಂದ 17ರ ವರೆಗೆ 6 ದಿನಗಳ ಕಾಲ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಅಧ್ಯಕ್ಷ ಪುಟ್ಟ ಸುಧಾಕರ ಯಾದವ್‌ ಅವರು ಈ ಮಾಹಿತಿ ನೀಡಿದ್ದು, ದೇಗುಲದಲ್ಲಿನ ಕೆಲವು ಜೀರ್ಣೋದ್ದಾರ ಕೆಲಸಗಳಿರುವುದರಿಂದ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಈ ಆರು ದಿನಗಳ ಅವಧಿಯಲ್ಲಿ ವೇದ ಝೇಂಕಾರಗಳೊಂದಿಗೆ ತಿರುಪತಿ ತಿಮ್ಮಪ್ಪನ ವಿಗ್ರಹಕ್ಕೆ “ಅಷ್ಟಬಂಧನ ಬಾಲಾಲಯ ಮಹಾಸಂ ಪ್ರೋಕ್ಷಣಮ್‌’ ನಡೆಲಾಗುತ್ತದೆ. ಅಲ್ಲದೆ ಕೆಲವು ರೀತಿಯ ಗಿಡಮೂಲಿಕೆ ಗಳನ್ನು ಬಳಸಿಕೊಂಡು ವಿಗ್ರಹದಲ್ಲಿ ಉಂಟಾಗಿರುವ ಸಣ್ಣಪುಟ್ಟ ಬಿರುಕು ಗಳನ್ನು ಸರಿಮಾಡಲಾಗುತ್ತದೆಂದು ಹೇಳಿದ್ದಾರೆ.
ವಿಶೇಷವೆಂದರೆ 12 ವರ್ಷಗಳ ತರುವಾಯ ಈ ರೀತಿಯ ಪೂಜೆ ನಡೆಸಲಾಗುತ್ತಿದೆ ಎಂದಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ಭಕ್ತರಿಗೆ ತಿರುಮಲ ಬೆಟ್ಟಕ್ಕೇ ಪ್ರವೇಶ ನೀಡಲಾಗುವುದಿಲ್ಲ. ದೇಗುಲಕ್ಕೆ ಬರುವ ಎಲ್ಲಾ ಮಾರ್ಗಗಳನ್ನು 10 ಕಿ.ಮೀ. ದೂರದಲ್ಲೇ ಮುಚ್ಚಲಾಗುತ್ತದೆ ಎಂದು ಹೇಳಿದ್ದಾರೆ. ಆ.17ರ ನಂತರ ಮತ್ತೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಸುಧಾಕರ ಯಾದವ್‌ ತಿಳಿಸಿದ್ದಾರೆ. 13.5 ಕೋಟಿ ದೇಣಿಗೆ: ತಿರುಮಲದ ವೆಂಕಟೇಶ್ವರ ದೇವಾಲಯಕ್ಕೆ ಅಮೆರಿಕ ಮೂಲದ ಇಬ್ಬರು ಅನಿವಾಸಿ ಭಾರತೀಯ ಉದ್ಯಮಿಗಳು 13.5 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಮೂಲತಃ ಆಂಧ್ರ ಪ್ರದೇಶದವರಾದ ಇಕಾ ರವಿ 10 ಕೋಟಿ ರೂ. ಮತ್ತು ಶ್ರೀನಿವಾಸ್‌ ಗೊಟ್ಟಿಕೊಂಡ 3.5 ಕೋಟಿ ರೂ. ದೇಣಿಗೆ ನೀಡಿರುವುದಾಗಿ ಟಿಟಿಡಿ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ