ಶ್ರೀನಗರ, ಜು.13- ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಎಸ್‍ಐ ಸೇರಿದಂತೆ ಸಿಆರ್‍ಪಿಎಫ್‍ನ ಇಬ್ಬರು ಯೋಧರು ಹುತಾತ್ಮರಾಗಿದ್ದು, ಒಬ್ಬರು ತೀವ್ರ ಗಾಯಗೊಂಡಿದ್ದಾರೆ.
ಅನಂತನಾಗ್ ಜಿಲ್ಲೆಯ ಅಚಬಲ್ ಚೌಕ್‍ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಿಯೋಜಿಸಲಾಗಿದ್ದ ಸಿಆರ್‍ಪಿಎಫ್ ಗಸ್ತು ವಾಹನದ ಮೇಲೆ ಉಗ್ರರು ಇಂದು ಬೆಳಗ್ಗೆ ಗುಂಡಿನ ದಾಳಿ ನಡೆಸಿದರು. ಈ ಕೃತ್ಯದಲ್ಲಿ ಮೂವರು ಯೋಧರು ತೀವ್ರ ಗಾಯಗೊಂಡರು. ನಂತರ ಸಬ್ ಇನ್ಸ್‍ಪೆಕ್ಟರ್ ಮೀನ ಮತ್ತು ಕಾನ್ಸ್‍ಟೆಬಲ್ ಸಂದೀಪ್ ವೀರಮರಣ ಹೊಂದಿದರು. ದಾಳಿ ನಡೆಸಿ ಪರಾರಿಯಾಗಿರುವ ಉಗ್ರಗಾಮಿಗಳಿಗಾಗಿ ಈ ಪ್ರದೇಶವನ್ನು ಭದ್ರತಾ ಪಡೆ ಸುತ್ತುವರಿದಿದ್ದು ದಾಳಿ ನಡೆಸಿ ಪರಾರಿಯಾಗಿರುವ ಉಗ್ರಗಾಮಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ. ಕುಪ್ವಾರದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಿನ್ನೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರನೊಬ್ಬ ಹತನಾದ. ಶೋಪಿಯಾನ್ ಜಿಲ್ಲೆಯ ಅಹ್ಲಾಮ್ ಗ್ರಾಮದಲ್ಲಿ ಗಸ್ತು ತಿರುಗುತ್ತಿದ್ದ ಸೇನಾ ಪಡೆಗಳ ಮೇಲೆ ಉಗ್ರರು ನಿನ್ನೆ ಗ್ರೆನೇಡ್ ದಾಳಿ ನಡೆಸಿ ಕೆಲವು ಯೋಧರು ಗಾಯಗೊಳಿಸಿ ಪರಾರಿಯಾಗಿದ್ದರು.