ಬೆಂಗಳೂರು, ಜು.13- ಬಡ್ತಿ ಮೀಸಲಾತಿ ವಿಷಯದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ತಿದ್ದುಪಡಿ ಮಸೂದೆ -2017ಅನ್ನು ಮರುಪರಿಶೀಲಿಸುವುದಿಲ್ಲ. ಯಥಾವತ್ತಾಗಿ ಜಾರಿ ಮಾಡಲು ಬದ್ಧರಾಗಿದ್ದೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ್ ಅವರು ನಿಲುವಳಿ ಸೂಚನೆ ನೀಡಿ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ವಿಷಯವನ್ನು ನಿಲುವಳಿ ಸೂಚನೆ ಬದಲಾಗಿ ಸಾರ್ವಜನಿಕ ಮಹತ್ವದ ಚರ್ಚೆಯನ್ನಾಗಿ ಪರಿವರ್ತಿಸಿ ನಿಯಮ 69ರಡಿ ಅವಕಾಶ ನೀಡಿದ ಸ್ಪೀಕರ್ ರಮೇಶ್‍ಕುಮಾರ್ ಅವರು, ಒಂದು ಹಂತದಲ್ಲಿ ಕಾಯ್ದೆಯ ಜಾರಿಗೆ ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿದರು. ಜು.27ರ ನಂತರ ಕಾಲ ವಿಸ್ತರಿಸುವುದು ಬೇಡ ಎಂದು ತಾಕೀತು ಮಾಡಿದರು.
ಬಡ್ತಿ ಮೀಸಲಾತಿ ವಿಷಯ ವಿಧಾನಸಭೆಯಲ್ಲಿ ಗಂಭೀರ ಚರ್ಚೆಗೊಳಗಾಗಿ ಪಕ್ಷಾತೀತವಾಗಿ ಮೀಸಲು ಕ್ಷೇತ್ರದ ಶಾಸಕರು ತಮ್ಮ ಅಭಿಪ್ರಾಯ ತಿಳಿಸಿದರು.
ವಿಷಯ ಪ್ರಸ್ತಾಪಿಸಿದ ಪಿ.ರಾಜೀವ್ ಅವರು, ಎಸ್ಸಿ, ಎಸ್ಟಿ ಸಮುದಾಯಕ್ಕೆ ಬಡ್ತಿಯಲ್ಲಾಗಿರುವ ಅನ್ಯಾಯ ಸರಿಪಡಿಸಲು ಈ ಮೊದಲು ಒಂದು ಕಾಯ್ದೆ ಜಾರಿಯಾಗಿತ್ತು. ಸುಪ್ರೀಂಕೋರ್ಟ್ ಅದನ್ನು ರದ್ದುಗೊಳಿಸಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಹಿತ ರಕ್ಷಣೆಗಾಗಿ ರಾಜ್ಯ ಸರ್ಕಾರ 2017ರಲ್ಲಿ ತಿದ್ದುಪಡಿ ಮಸೂದೆಯೊಂದನ್ನು ರೂಪಿಸಿದೆ. ಅದಕ್ಕೆ ರಾಷ್ಟ್ರಪತಿಯವರ ಸಹಿಯೂ ಆಗಿದೆ. ಅಧಿಕೃತ ರಾಜ್ಯಪತ್ರವನ್ನೂ ಹೊರಡಿಸಲಾಗಿದೆ. ಆದರೆ, ಕಾಯ್ದೆ ಜಾರಿಯಾಗಿಲ್ಲ. ಸರ್ಕಾರ ತಾನೇ ರೂಪಿಸಿದ ಕಾಯ್ದೆಯನ್ನು ಜಾರಿ ಮಾಡದಿದ್ದರೆ ಜನರಿಗೆ ಹೇಗೆ ಮುಖ ತೋರಿಸುತ್ತದೆ ಎಂದು ಪ್ರಶ್ನಿಸಿದರು.
ಇದಕ್ಕೆ ಸರ್ಕಾರದ ಪರವಾಗಿ ಉತ್ತರಿಸಿದ ಸಚಿವ ಕೃಷ್ಣಬೈರೇಗೌಡ ಅವರು, ಕಾನೂನನ್ನು ಮರುಪರಿಶೀಲನೆ ಮಾಡುತ್ತಿಲ್ಲ. ಅದನ್ನು ಜಾರಿಗೊಳಿಸಲು ಬದ್ಧವಾಗಿದ್ದೇವೆ. ಸುಪ್ರೀಂಕೋರ್ಟ್ ಈಗಾಗಲೇ ಬಡ್ತಿ ಮೀಸಲಾತಿ ವಿಷಯದಲ್ಲಿ ಎರಡು ಬಾರಿ ವಿಚಾರಣೆ ನಡೆಸಿದೆ. ಜು.27ಕ್ಕೆ ಮತ್ತೊಂದು ದಿನಾಂಕ ನಿಗದಿ ಮಾಡಿದೆ. ಅಂದು ಸರ್ಕಾರದವತಿಯಿಂದ ಕೇವಿಯೇಟ್ ಸಲ್ಲಿಸುವ ಸಾಧ್ಯತೆ ಇದೆ. ಕಾಯ್ದೆ ಜಾರಿಯ ಬಗ್ಗೆ ಅಡ್ವೋಕೇಟ್ ಅವರ ಸಲಹೆ ಕೇಳಿದಾಗ ಜು.27ರಂದು ನಡೆಯುವ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಪ್ರತಿ ವಾದಿಗಳು ರಾಜ್ಯ ಸರ್ಕಾರದ ತಿದ್ದುಪಡಿ ಕಾಯ್ದೆಯನ್ನೇ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.
ಆದರೆ ಸುಪ್ರೀಂಕೋರ್ಟ್ ಕಾಯ್ದೆಯನ್ನು ಪ್ರಶ್ನೆ ಮಾಡಿಲ್ಲ. ಕಾಯ್ದೆಯಿಂದ ಆಗುವ ಪರಿಣಾಮಗಳ ಬಗ್ಗೆ ವಿಚಾರಣೆ ನಡೆಸುತ್ತಿದೆ. ಈವರೆಗೂ ಯಾವುದೇ ತಡೆಯಾಜ್ಞೆಯನ್ನು ನೀಡಿಲ್ಲ. ಹಾಗಾಗಿ ತಿದ್ದುಪಡಿ ಕಾಯ್ದೆ ಜಾರಿಗೆ ತರಲು ಸರ್ಕಾರ ಹಿಂದೇಟು ಹಾಕಿಲ್ಲ. ಎಲ್ಲವನ್ನೂ ವ್ಯವಸ್ಥಿತವಾಗಿ ಕಾನೂನುಬದ್ಧವಾಗಿ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಗೋವಿಂದಕಾರಜೋಳ ಅವರು, ಸುಪ್ರೀಂಕೋರ್ಟ್ ವಿಚಾರಣೆಯನ್ನು ನೆಪವಿಟ್ಟುಕೊಂಡು 2017ರ ಕಾಯ್ದೆ ಜಾರಿಗೊಳಿಸಲು ವಿಳಂಬ ಮಾಡಲಾಗುತ್ತಿದೆ. ಈ ನಡುವೆ ಇಲಾಖೆ ಬಡ್ತಿ ಸಮಿತಿಗಳ ದಿನಾಂಕಗಳನ್ನು ನಿಗದಿಗಿಂತಲೂ ಮೊದಲೇ ನಡೆಸಿ ತರಾತುರಿಯಲ್ಲಿ ಬಡ್ತಿ ನೀಡಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಿ.ರಾಜೀವ್ ಕೂಡ ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಬಿ.ಕೆ.ಪವಿತ್ರ ಪ್ರಕರಣದಲ್ಲಿ ಸುಪ್ರೀಂಕೋಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ನೀಡಲಾಗಿರುವ ಮುಂಬಡ್ತಿಗಳು ಹಾಗೂ ಇಲಾಖಾ ಬಡ್ತಿ ಸಮಿತಿಯ ತೀರ್ಮಾನಗಳನ್ನು ಸೂಪರ್‍ಸೀಡ್ ಮಾಡಲಾಗಿದೆ. ರಾಷ್ಟ್ರಪತಿಯವರು ತಿದ್ದುಪಡಿ ಮಸೂದೆಗೆ ಸಹಿ ಹಾಕಿದ ನಂತರವೇ ಈ ಕಾಯ್ದೆಯ ವಿರುದ್ಧವಾಗಿ ನಡೆದಿದ್ದ ಇಲಾಖ ಬಡ್ತಿ ಸಮಿತಿ ಸಭೆಗಳ ಪ್ರಕ್ರಿಯೆಗಳು ರದ್ದುಗೊಳ್ಳುತ್ತವೆ. ಹಿಂಬಡ್ತಿ ನೀಡಲಾದ ಪ್ರಕರಣಗಳನ್ನು ಪರಿಶೀಲಿಸಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ ಎಂದರು.
ಸ್ಪೀಕರ್ ರಮೇಶ್‍ಕುಮಾರ್ ಅವರು ಸರ್ಕಾರಕ್ಕೆ ನೇರವಾಗಿ ಸೂಚನೆ ನೀಡಿ. ಸುಪ್ರೀಂಕೋರ್ಟ್‍ನ ದಿನಾಂಕಗಳು ಪದೇ ಪದೇ ಮುಂದೂಡಿಕೆಯಾಗಲು ಅವಕಾಶ ನೀಡಬಾರದು. ಒಂದು ವೇಳೆ ವಿಚಾರಣಾ ದಿನಾಂಕ ಮುಂದೂಡಿಕೆಯಾದರೂ 2017ರ ಕಾಯ್ದೆಯನ್ನು ತಕ್ಷಣವೇ ಜಾರಿಗೆ ತರಬೇಕು. ಜು.27ರಂದು ಸುಪ್ರೀಂಕೋರ್ಟ್ ನಡೆಸುವ ವಿಚಾರಣೆವರೆಗೂ ಗಡುವು ನಿಗದಿ ಮಾಡಿಕೊಳ್ಳಿ. ಅನಂತರ ವಿಚಾರಣೆ ದಿನಾಂಕ ಮುಂದೂಡಲಿ ಅಥವಾ ಕೋರ್ಟ್‍ನ ತೀರ್ಪು ಏನೇ ಬರಲಿ ಕಾಯ್ದೆಯನ್ನು ಜಾರಿಗೆ ತನ್ನಿ. ನಂತರ ಯಾವುದಾದರು ಬಿಕ್ಕಟ್ಟುಗಳು ಎದುರಾದರೆ ನೋಡೋಣ ಎಂದು ಸೂಚನೆ ನೀಡಿದರು.
ಬಡ್ತಿ ಮೀಸಲಾತಿ ಯಾರು ಯಾರಿಗೂ ಮಾಡುವ ಉಪಕಾರ ಅಲ್ಲ. ಇದನ್ನೆಲ್ಲಾ ಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವಂತೆಯೂ ಅವರು ಸಲಹೆ ನೀಡಿದರು.
ಬಿಜೆಪಿಯ ಹಿರಿಯ ಶಾಸಕ ಜಗದೀಶ್ ಶೆಟ್ಟರ್, ಗೂಳಿಹಟ್ಟಿ ಶೇಖರ್, ಎಂ.ಪಿ.ಕುಮಾರಸ್ವಾಮಿ, ಚಂದ್ರಪ್ಪ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.